ಶಿಲ್ಪಕಲೆ -
	ಮರ, ಲೋಹ ಅಥವಾ ಶಿಲಾನಿರ್ಮಿತ ಕಲಾತ್ಮಕವೂ ಸಂಕೀರ್ಣವೂ ಆದ ಕೆತ್ತನೆಕಲೆ (ಸ್ಕಲ್ಪ್‍ಚರ್). ಶಿಲ್ಪ ಎಂಬ ಪದ ಸಂಸ್ಕøತದ ಶಿಲ್ ಧಾತುವಿನಿಂದ ನಿಷ್ಪನ್ನವಾಗಿ ಶೀಲ ಸಮಾಧೌ ಎಂಬರ್ಥದಲ್ಲಿ ಬಳಕೆಯಾದದ್ದು. ಅಂದರೆ ಧ್ಯಾನ, ಭಾವ, ಆಲೋಚನೆಗ ಳಿಂದ ಪ್ರೇರಿತವಾದ ತಪಸ್ಸು ಅಥವಾ ಸಮಾಧಿಸ್ಥಿತಿಯ ಫಲವೇ ಶಿಲ್ಪ. ಅದು ಮನಸ್ಸಿನ ಕಾರ್ಯ ಎಂದು ಶಿಲ್ಪೋಪನಿಷತ್ ಎಂಬ ಗ್ರಂಥ ಹೇಳುತ್ತದೆ. ಆಶ್ಚರ್ಯಕರಂ ಕರ್ಮ ಕರ್ಮೇತಿ ಹಸ್ತಯೋಃ ಎಂಬ ವ್ಯಾಖ್ಯಾನವು ಇದೆ. ಪಾಶ್ಚಾತ್ಯ ದೇಶಗಳಲ್ಲಿ ಸ್ಕಲ್ಪ್‍ಚರ್ ಎಂಬುದು ಕತ್ತರಿಸು(ಕಟ್) ಹಾಗೂ ಕೆತ್ತು(ಕಾರ್ವ್) ಎಂಬರ್ಥದಲ್ಲೂ ಬಳಕೆಯಾಗುತ್ತಿದೆ. ಚೀನ ಮತ್ತಿತರ ಏಷ್ಯ ಖಂಡಗಳಲ್ಲಿಯೂ ಶಿಲ್ಪಕ್ಕೆ ತಪಸ್ಸಿನ ಫಲವಾಗಿ ಮೂಡಿದ ಕಾರ್ಯ ಎಂಬ ವ್ಯಾಖ್ಯಾನವಿದೆ. ಪ್ರಾಚೀನ ಸಂಸ್ಕøತ ಗ್ರಂಥಗಳಲ್ಲಿ, ವ್ಯಾಖ್ಯಾನಗಳಲ್ಲಿ ಶಿಲ್ಪಕ್ಕೆ ಕಲಾಕೌಶಲ ಎಂಬ ಅರ್ಥವಿದೆ.

ಮಾನವನ ನಾಗರಿಕತೆ ಹಾಗೂ ಕಲೆಯ ಬೆಳೆವಣಿಗೆಯನ್ನು ಕುರಿತು ಅಧ್ಯಯನಿಸಲು ಶಿಲ್ಪಕಲೆ ಸಹಕಾರಿಯಾಗಿದೆ. ಭಾವನೆಗಳನ್ನು ಕಲೆಯ ಮೂಲಕ ಶಾಶ್ವತೀಕರಿಸುವ ಪ್ರಾಚೀನ ಮಾನವನ ಪ್ರಯತ್ನವೇ ಶಿಲ್ಪಕಲೆಯ ಉಗಮಕ್ಕೆ ಕಾರಣವಾಗಿದೆ. ಕಾಲಕ್ರಮೇಣ ಅದು  ಅವನ ಭಾವನೆಗಳ ಅಭಿವ್ಯಕ್ತಿಯೊಂದಿಗೆ ಆದರ್ಶೀಕರಿಸುವ ಪ್ರಯತ್ನದಲ್ಲಿ ತೊಡಗಿಕೊಂಡಿದ್ದು ಅನೇಕ ಉತ್ಖನನಗಳಿಂದ, ಸಂಶೋಧನೆಗಳಿಂದ ಸ್ಪಷ್ಟವಾಗಿದೆ. ಪ್ರಾಚೀನ ಗ್ರೀಕರು ಹಾಗೂ ಮಧ್ಯಯುಗದ ಜನ ಮಾನವನ ಆದರ್ಶರೂಪವನ್ನು ಧ್ಯಾನಸ್ಥ ಅಥವಾ ದೈವಿಕಸ್ಪರ್ಶಭಾವಗಳುಳ್ಳ ಶಿಲ್ಪಗಳ ಮೂಲಕ ಕಡೆದರು. ಅಪೋಲೋ, ಪೋಸೆಡಾನ್ ವಿಗ್ರಹಗಳನ್ನು (ಕ್ರಿ.ಪೂ. 447-23) ಗ್ರೀಕರು ಕೆತ್ತಿರುವ ರೀತಿ ಗಮನಿಸಿದರೆ ಈ ಅಂಶ ಅರ್ಥವಾಗುತ್ತದೆ. ಮನುಷ್ಯ ಸತ್ತ ಅನಂತರದ ಬದುಕು ತೀವ್ರಕುತೂಹಲಕ್ಕೆ ಕಾರಣವಾಗಿತ್ತೆಂ ಬುದು ಅಧ್ಯಾತ್ಮ ನಿರೂಪಣೆಗಳನ್ನೊಳಗೊಂಡ ಮಧ್ಯಯುಗದ ಶಿಲ್ಪಗಳ ಮೂಲಕ ತಿಳಿದುಬರುತ್ತದೆ. ಸು. 1120ರಲ್ಲಿ ರೋಮನ್ನರು ಕೆತ್ತಿದ ತೆಳುಶರೀರದ ಧ್ಯಾನಸ್ಥ ಶಿಲ್ಪಗಳು ಇದಕ್ಕೆ ಸಾಕ್ಷಿ. ಫ್ರಾನ್ಸ್‍ನ ಟಿಂಪ್ಯಾನಂ ಎಂಬಲ್ಲಿಯ ವ್ಯಾಸೆಲೆ ಅಬೆಯಲ್ಲಿರುವ ಶಿಲ್ಪಗಳೂ ಈ ಮಾದರಿಯವೇ. ಭಾರತೀಯರಿಗೆ, ಚೀನೀಯರಿಗೆ ಶಿಲ್ಪಕಲೆಯೆಂಬುದು ಮನುಷ್ಯ ಧ್ಯಾನೋನ್ಮುಖನಾಗಿ ಮುಕ್ತಿಯೆಡೆಗೆ ಸಾಗಲು ನಿರ್ಮಿಸಿಕೊಂಡ ಒಂದು ಮಾಧ್ಯಮ. ಅದಕ್ಕಾಗಿಯೇ ಅವರು ಬೌದ್ಧ ಹಾಗೂ ಹಿಂದು ಧರ್ಮಗಳ ಅಧ್ಯಾತ್ಮ ಭಾವ ನಿರೂಪಣೆಗಳ ಶಿಲ್ಪಗಳನ್ನು ಕೆತ್ತಿದರು. ಮಥುರಾದಲ್ಲಿ ದೊರೆತ, ಕಿ.್ರಶ. 100ರಲ್ಲಿ ಕೆತ್ತಿರಬಹುದಾದ ಕುಶಾನರ ಕಾಲದ ಕೆಂಪು ಮರಳುಕಲ್ಲಿನ ಧ್ಯಾನಸ್ಥ ಶಾಕ್ಯ ಮುನಿ (ಈಗ ಅದು ಕ್ಲೀವ್‍ಲೆಂಡ್ ಮ್ಯೂಸಿಯಮ್‍ನಲ್ಲಿದೆ) ಹಾಗೂ ಚೀನದ ಕ್ರಿ.ಶ. ಸು. 530ರ ಸುಣ್ಣಕಲ್ಲಿನ ಧ್ಯಾನಸ್ಥ ಬೋಧಿಸತ್ತ್ವ (ಈಗ ಬಾಸ್ಟನ್‍ನ ಮ್ಯೂಸಿಯಮ್ ಆಫ್ ಫೈನ್ ಆಟ್ರ್ಸ್‍ನಲ್ಲಿದೆ). ಇವನ್ನು ಗಮನಿಸಿದರೆ ಹೆಚ್ಚು ತಾಳಿಕೆಯಿರುವ ಕಲ್ಲುಗಳ ಮೂಲಕ ಮಾನವ ತನ್ನ ಜ್ಞಾನ ಹಾಗೂ ಅಧ್ಯಾತ್ಮದೆಡೆಗಿನ ಸೆಳೆತವನ್ನು ಶಾಶ್ವತೀಕರಿಸುವ ಪ್ರಯತ್ನದಲ್ಲಿ ತೊಡಗಿರುವುದು ಕಂಡುಬರುತ್ತದೆ. ಇದೇ ರೀತಿ ಈಜಿಪ್ಟ್, ಬ್ಯಾಬಿಲೋನಿಯ, ಮೆಸಪೊ ಟೋಮಿಯ, ಅಸ್ಸೀರಿಯ ಹಾಗೂ ಪರ್ಷಿಯಗಳಲ್ಲಿ ಉತ್ಖನನಗಳಿಂದ ಹಾಗೂ ಗುಹೆಗಳ ಶೋಧನೆಯಿಂದ ದೊರೆತ ಶಿಲ್ಪಗಳು, ಮಾದರಿಗಳು, ತುಣುಕುಗಳು ಪ್ರಾಚೀನಯುಗದ ಶಿಲ್ಪಕಲೆಯ ಸ್ವರೂಪ ಹಾಗೂ ಬೆಳೆವಣಿಗೆಗಳನ್ನು ಗುರುತಿಸಲು ಸಹಾಯಕವಾಗಿವೆ.

ಭಾರತೀಯ ನಾಗರಿಕತೆಯನ್ನು ನಿಖರಗೊಳಿಸುವ ಶಿಲ್ಪಸಾಮಗ್ರಿಗಳನ್ನು ಅಧ್ಯಯನ ಮಾಡಬೇಕಾದರೆ ಹರಪ್ಪ ಸಂಸ್ಕøತಿಯನ್ನು(ಕ್ರಿ.ಪೂ. 2500-1200) ಅವಲೋಕಿಸಬೇಕು. ಸಿಂಧೂಕಣಿವೆಯಲ್ಲಿ ದೊರಕಿರುವ ಮುದ್ರಿಕೆಗಳು, ಮಣಿಗಳು ಇತ್ಯಾದಿಗಳನ್ನೇ ಹೋಲುವ ಸುಮೇರಿಯ ನಾಗರಿಕತೆಯ ಕುರುಹುಗಳು ಮೆಸಪೊಟೋಮಿಯದ ಲಗಷ್, ಉರ್, ಟೆಲ್‍ಅಸ್ಮರ್ ಮುಂತಾದೆಡೆಯಲ್ಲಿ ದೊರೆತಿವೆ. ಅಲ್ಲಿಯ ಮುದ್ರಿಕೆಗಳ ಮೇಲಿನ ಮನುಷ್ಯ ಮತ್ತು ಪ್ರಾಣಿಗಳ ಕೆತ್ತನೆಯ ನೈಪುಣ್ಯ ಆ ಕಾಲವು ಸಾಧಿಸಿಕೊಂಡಿದ್ದ ಕಲಾಕೌಶಲ್ಯ ಹಾಗೂ ತಾಂತ್ರಿಕ ಗುಣಮಟ್ಟವನ್ನು ಪ್ರತಿನಿಧಿಸುತ್ತದೆ.

	ಮೊಹೆಂಜೊದಾರೊನಲ್ಲಿ ಭೂಮಿಯ ಮೇಲುಸ್ತರದಲ್ಲೇ ದೊರೆತಿರುವ ಮೆದು ಬಿಳಿಕಲ್ಲು ಹಾಗೂ ಸುಣ್ಣಕಲ್ಲಿನ 17.5 ಸೆಂಮೀ ಉದ್ದದ ಗಡ್ಡದ ಮನುಷ್ಯನ ಪ್ರತಿಮೆ ಮತ್ತು 42 ಸೆಂಮೀ ಎತ್ತರದ ಮನುಷ್ಯನ ಪ್ರತಿಮೆಗಳು ಅರ್ಧನಿಮೀಲಿತನೇತ್ರ ಮತ್ತು ಚಿತ್ತಾರದ ವಸ್ತ್ರಭೂಷಣಗಳೊಂದಿಗೆ ಕುತೂಹಲಕರ ಅಧ್ಯಯನಕ್ಕೆ ಸಾಮಗ್ರಿಯಾಗಿವೆ. ಹಾಗೆಯೇ ಹರಪ್ಪದಲ್ಲಿ ದೊರೆತ ಕಂಚಿನ ನೃತ್ಯಗಾತಿಯ ಪ್ರತಿಮೆ (ಈಗ ದೆಹಲಿಯ ವಸ್ತುಸಂಗ್ರ ಹಾಲಯದಲ್ಲಿದೆ) ಸಿಂಧೂಕಣಿವೆಯ ಲೋಥಲ್‍ನಲ್ಲಿ ದೊರೆತಿರುವ ಹೆಣ್ಣಿನ ಮೂರ್ತಿ ಮತ್ತು ಮಾತೃದೇವಿಯ ಮೂರ್ತಿಗಳೆಂದು ನಂಬಲಾಗಿರುವ ಅನೇಕ ಸ್ತ್ರೀಶಿಲ್ಪಗಳು ವಸ್ತ್ರಾಭರಣಗಳಿಂದ ಹಾಗೂ ಭಾವಭಾವನೆಗಳ ಖಚಿತ ನಿರೂಪಣೆಯಿಂದ ಅಂದಿನ ಶಿಲ್ಪಕಲೆಯ ಪ್ರಗತಿಯ ದಿಕ್ಕನ್ನು ಅಭ್ಯಸಿಸಲು ಆಧಾರವಾಗಿವೆ. ಅಲ್ಲದೆ, ಹರಪ್ಪ ಸಂಸ್ಕøತಿಯನ್ನು ಬಿಂಬಿಸುವ ಪ್ರಾಣಿಗಳ ಮುದ್ರಿಕೆಗಳೇ ಸು.2000 ದಷ್ಟಿದ್ದು ಸಿಂಧೂಕಣಿವೆಯುದ್ದಕ್ಕೂ ಬೆಳೆದು ಬಂದ ಪ್ರಾಚೀನ ಶಿಲ್ಪಕಲಾ ಮಾದರಿಗಳಾಗಿ ಇತಿಹಾಸ ನಿರ್ಮಿಸಿವೆ. ಹರಪ್ಪ ಸಂಸ್ಕøತಿಯ ಪತನದ ಅನಂತರ ಮೌರ್ಯರ ಕಾಲದವರೆಗಿನ (ಕ್ರಿ.ಪೂ. 324-118) ಚರಿತ್ರೆ ಕತ್ತಲಲ್ಲೇ ಉಳಿದಿದೆ. ಈ ಸಾಮ್ರಾಜ್ಯ ಪರ್ಷಿಯದವರೆಗೂ ವ್ಯಾಪಿಸಿತ್ತು. ಅದರ ಪ್ರಭಾವದಿಂದೊಡಗೂಡಿದ ಈ ಕಾಲದ ಬಹುಮುಖ್ಯಶಿಲ್ಪದ ಉಳಿಕೆಗಳೆಂದರೆ ಅಶೋಕಸ್ತಂಭದ ಮೇಲಿನ ವಿಗ್ರಹಗಳು. ಪ್ರಾಚೀನ ವೈಶಾಲಿಯ ಸಿಂಹಸ್ತಂಭ ಬಹು ನಾಜೂಕಿನ ಕೆತ್ತನೆ. ಇದು ಮೌರ್ಯರ ಕಾಲದ ಪ್ರಾರಂಭಿಕ ನಮೂನೆಯಾಗಿರ ಬಹುದೆಂಬ ಊಹೆಯಿದೆ. ರಾಂಪೂರ್ವ, ಲೌರಿಯ ಮತ್ತು ನಂದನಗಢದ ಸಿಂಹದ ಪ್ರತಿಮೆಗಳು ಸೂಕ್ಷ್ಮವಾಗಿ ಸಿಂಹದ ಚಲನಾತ್ಮಕ ಭಂಗಿಯನ್ನು ಬಿಂಬಿಸುವಂಥವು. ಇವುಗಳನ್ನು ಆ ಕಾಲಕ್ಕೆ ದಿಕ್ಸೂಚಿಸ್ತಂಭಗಳಾಗಿ ನಿಲ್ಲಿಸಿರುವ ಸಾಧ್ಯತೆಯಿದೆ. ಸಾರಾನಾಥ ಹಾಗೂ ಸಾಂಚಿಯ ನಾಲ್ಕು ಸಿಂಹಗಳ ಸ್ತಂಭಗಳು ಇದರ ಅಂತಿಮ ವಿಕಾಸ ರೂಪವಿರಬಹುದು. ಅನಂತರ ಬಂದ ಶುಂಗರ ಕಾಲದ (ಕ್ರಿ.ಪೂ. 188-76) ಸಾಂಚೀಸ್ತೂಪ, ಬಾರ್ಹತ್ ಮತ್ತು ಗಯದ ಸ್ತೂಪಗಳಲ್ಲಿ ಅಪ್ಸರಸ್ತ್ರೀಯರ ನೃತ್ಯ ಪಟ್ಟಿಕೆಗಳೂ, ಕುಸರಿಗೆಲಸದ ಪಟ್ಟಿಕೆಗಳೂ ಇವೆ. ಇವು ಶಿಲ್ಪಕಲೆ ಪ್ರಾಚೀನ ಶೈಲಿಯಿಂದ ಮತ್ತೊಂದು ಶೈಲಿಯೆಡೆಗೆ ಹೊರಳಿಕೊಂಡದ್ದರ ದ್ಯೋತಕವಾಗಿವೆ.

	ಕುಶಾನರ ಕಾಲ (ಕ್ರಿ.ಪೂ. 78- ಕ್ರಿ.ಶ.200). ಗ್ರೀಕ್ ಮತ್ತು ಬೌದ್ಧ ಕಲೆಗಳ ಮಿಶ್ರ ರೂಪವಾದ ಗಾಂಧಾರಕಲೆಯನ್ನು, ಕ್ರಿ.ಶ. 5ನೆಯ ಶತಮಾನದವರೆಗೆ ಒಯ್ದಿದೆ. ಆಗ ಗಾಂಧಾರ ದೇಶ ಎನಿಸಿದ್ದ ಸಿಂಧೂನದಿಯ ಪಶ್ಚಿಮ ದಂಡೆ ಹಾಗೂ ಪೆಷಾವರ್, ಸ್ವಾತ್, ಬುನೆರ್, ಬಾಜೌರ್ ನದಿ ಕಣಿವೆಗಳು, ಅಲೆಗ್ಸಾಂಡರನ ದಾಳಿ, ಚಂದ್ರಗುಪ್ತಮೌರ್ಯನ ಆಗಮನ, ಸೆಲ್ಯೂಕಸ್, ಶಕರು, ಪಾರ್ಥಿನಿಯನ್ನರು, ಕುಶಾನರು ಹಾಗೂ ಪರ್ಷಿಯನ್ನರ ಪುನರಾಕ್ರಮಣಗಳೆಲ್ಲ(13) ಸೇರಿ ಗಾಂಧಾರಕಲೆ ಎಂಬುದು ಒಂದು ಮಿಶ್ರ ಸಂಸ್ಕøತಿಯ ರೂಪವಾಗಿ ಅಭಿವ್ಯಕ್ತಗೊಳ್ಳಲು ಕಾರಣವಾದುವು. 2ನೆಯ ಶತಮಾನದ ಕುಶಾನರ ಕಾಲದ ನಾಣ್ಯಗಳಲ್ಲಿರುವ ದೇವತೆಗಳ ವೈವಿಧ್ಯ ಬೆರಗುಗೊಳಿಸುವಂಥದು. ಪರ್ಷಿಯನ್ನರ ಮಿಯೋರೋ (ಸೂರ್ಯ). ಮಾವೋ(ಚಂದ್ರ), ಒಯಾಡೋ(ಗಾಳಿ) ಹಾಗೂ ಗ್ರೀಕರ ಹಿರಿಯೋಸ್, ಸೆಲೆನಿಸಿ, ಹೆರಾಕಲ್ಸ್, ಬ್ಯಾಬಿಲೋನಿಯನ್ನರ ಅನಹಿತ, ಭಾರತದ ಶಿವ, ಸ್ಕಂದ, ವಿಶಾಖ ಇತ್ಯಾದಿ ದೇವತೆಗಳ ಮುದ್ರಿಕೆಗಳು ಗಾಂಧಾರಕಲೆಯ ಸಾಕ್ಷೀರೂಪಗಳು.

	4-7ನೆಯ ಶತಮಾನದ ಅವಧಿಯಲ್ಲಿ ಭಾರತ ಏಷ್ಯಾಖಂಡದ ಅತಿ ಪ್ರಮುಖ ಶಿಲ್ಪವೈವಿಧ್ಯಗಳನ್ನು ನೀಡಿದ ರಾಷ್ಟ್ರ ಎನಿಸಿತು. ಗೋಡೆಗಳಲ್ಲಿ ಕಡೆದ ಪಾನಗೋಷ್ಠಿಗಳ ಉಬ್ಬುಶಿಲ್ಪಗಳು, ಪಾನಪಾತ್ರೆಗಳ ಮೇಲಿನ ಚಿತ್ತಾರಗಳು, ಹೇರಳವಾದ ಬುದ್ಧನ ಶಿಲ್ಪಗಳು ಗಾಂಧಾರ ಹಾಗೂ ಮಥುರಾಗಳಲ್ಲಿ ದೊರೆತಿವೆ. ಬಾರ್ಹತ್ ಮತ್ತು ಸಾಂಚಿಗಳಲ್ಲಿಯಂತೆ ಗಾಂಧಾರಶಿಲ್ಪದಲ್ಲೂ ಬುದ್ಧನ ಜಾತಕಕಥೆಗಳ ನಿರೂಪಣೆಯಿದೆ. ಪೆಷಾವರದಲ್ಲಿ ದೊರೆತ ನಿಂತಿರುವ ಬುದ್ಧನ ಮೂರ್ತಿ ಗ್ರೀಕರ ಅಪೋಲೋಮೂರ್ತಿಯ ಹೋಲಿಕೆಯುಳ್ಳದ್ದಾಗಿ, ಶಿಲ್ಪಕಲೆ ಭಿನ್ನಸಂಸ್ಕøತಿ ಗಳನ್ನು ರೂಢಿಸಿಕೊಂಡ ರೀತಿಗೆ ಸಾಕ್ಷಿಯಾಗಿದೆ. ಗಾಂಧಾರ ಶಿಲ್ಪ ಮಾದರಿಗಳಲ್ಲಿ ಕೆಲವು ಶಿಲ್ಪದೊಂದಿಗೆ ಲೋಹದ ತಗಡುಗಳನ್ನು ಬಳಸಿ ಶಿಲ್ಪಸಾಮಥ್ರ್ಯವನ್ನು ಸಮರ್ಥಗೊಳಿಸುವ ಪ್ರಯತ್ನ ಮಾಡಿರುವುದು ಕಂಡುಬರುತ್ತದೆ. ಕೋಲ್ಕತದ ಮ್ಯೂಸಿಯಮ್‍ನಲ್ಲಿರುವ ಮಿಶ್ರಲೋಹ ಹಾಗೂ ಚಿನ್ನದ ಸಂಯೋಜನೆಯಿಂದ ಕೂಡಿರುವ ಕನಿಷ್ಕನ ಸ್ಮರಣಿಕಾ ಮಂಜೂಷ ಹಾಗೂ ಲಂಡನ್ ಬ್ರಿಟಿಷ್ ಮ್ಯೂಸಿಯಮ್‍ನಲ್ಲಿರುವ ಬೈಮರನ್ ಸ್ಮರಣಿಕೆಗಳು ಗಮನಾರ್ಹ ಮಾದರಿಗಳು. ಈ ವೃತ್ತಾಕಾರದ ಸ್ಮರಣಿಕಾ ಪೆಟ್ಟಿಗೆಗಳಲ್ಲಿ ಬುದ್ಧ ಮಧ್ಯದಲ್ಲೂ ಬ್ರಹ್ಮ-ಇಂದ್ರರು ಇಕ್ಕೆಲದಲ್ಲೂ ಇದ್ದಾರೆ. ಮಥುರಾದ ಶಿಲ್ಪಗಳು ಶಿಲ್ಪಕಲೆಗೆ ಕೊಟ್ಟ ಕೊಡುಗೆಗಳೆಂದರೆ, ಆ ಕಾಲಕ್ಕೆ ಪ್ರಾಚೀನ ಭಾರತದ ಯಾವ ಭಾಗದಲ್ಲೂ ಕಂಡುಬರದ ಭಾವಶಿಲ್ಪಗಳನ್ನು ರೂಢಿಗೆ ತಂದದ್ದು. ಈ ಮಾದರಿಯ ಪ್ರಸಿದ್ಧ ಶಿಲ್ಪಗ ಳೆಂದರೆ, ಮಥುರಾ ಮ್ಯೂಸಿಯಮ್‍ನಲ್ಲಿರುವ ಚಿತ್ತಾರದ ನಕ್ಷೆಗಳನ್ನುಳ್ಳ ಸಿಂಹಾಸನದಲ್ಲಿ ಕುಳಿತಿರುವ ವಿಮಕಡ್ಫಸಸ್ ಶಿಲ್ಪ ಹಾಗೂ ಸಾರಾನಾಥ್ ಮ್ಯೂಸಿಯಮ್‍ನಲ್ಲಿರುವ ನಿಂತಿರುವ ಬುದ್ಧನ ಪ್ರಾಚೀನ ಮೂರ್ತಿ (131-147). ಜ್ಞಾನೋದಯದ ಮುನ್ನಿನ ಬೋಧಿಸತ್ತ್ವನಮೂರ್ತಿ ಎನ್ನಲಾಗಿದೆ.

	ಭಾರತೀಯ ಶಿಲ್ಪಕಲೆಯ ಒಂದು ವಿಶೇಷ ಅಂಶವೆಂದರೆ ಕಾಲ ಬದಲಾಗುತ್ತ ಬಂದಂತೆ ಶಿಲ್ಪಗಳು ಚಲನಶೀಲ ಪ್ರಕೃತಿಯನ್ನು ಸಂಕೇತಿ ಸುತ್ತ ಬಂದದ್ದು. ಜಂಗಮಶೀಲತೆ ಭಾರತೀಯ ತತ್ತ್ವಶಾಸ್ತ್ರದ ಪ್ರಮುಖ ಅಂಶ. ಇದು ನಾಟ್ಯಶಿಲ್ಪಗಳಲ್ಲಿ ಕ್ರಿಯಾಶೀಲ ಬದುಕಿನ ಅನುಕರಣೆ ಮಾಡುವ ಸಮೂಹ ಶಿಲ್ಪಗಳಲ್ಲಿ ವ್ಯಕ್ತವಾಗಿದೆ. ಎರಡನೆಯದಾಗಿ ದಕ್ಷಿಣ ಭಾರತ ನೀಡಿದ ಆಭರಣ ಪಟ್ಟಿಕೆಗಳು, ಅಲಂಕರಣ ಪಟ್ಟಿಕೆಗಳನ್ನು ಗಮನಿಸಲೇಬೇಕು. ಅತಿಮುಖ್ಯವಾಗಿ ಕಿರೀಟಗಳಲ್ಲಿಯ ವೈವಿಧ್ಯಗಳು, ಸಿಂಹಾಸನಗಳಲ್ಲಿಯ ಕುಸುರಿ ಕೆತ್ತನೆಗಳು, ಕೇಯೂರ ಕಟಿಬಂಧಗಳು, ಉದರಬಂದಿ ತೋಳ್ಬಂದಿಗಳು, ವಲಯ, ಪಾದಗಳು, ಹಾರಗಳು, ಕಂಠಿಕೆಗಳು, ಕರ್ಣಭರಣಗಳು ಹಾಗೂ ಇತರ ತೊಡವುಗಳು ಏಕಕಾಲದಲ್ಲಿ ಶೃಂಗಾರ ಭಾವವನ್ನೂ, ಧ್ಯಾನಸ್ಥ ಮನಸ್ಸನ್ನೂ ವ್ಯಂಜಿಸಲು ಪೂರಕವಾಗಿ ಬಳಕೆಯಾಗಿವೆ. ಧ್ಯಾನಸ್ಥ ಶಿವ, ಧ್ಯಾನಸ್ಥ ಶಾಕ್ಯ ಇಂಥ ಶಿಲ್ಪಗಳಿಗೆ ತೊಡಿಸಿರುವ ಆಭರಣಗಳು ಹಾಗೂ ಅಲಂಕೃತ ಪ್ರಭಾವಲಯಗಳು ಅಧ್ಯಾತ್ಮಭಾವ ಕೆತ್ತನೆಗೆ ಪೂರಕವಾಗಿಯೇ ಇರುವುದನ್ನು ಗಮನಿಸಬೇಕು.

	ಪ್ರಪಂಚದ ಇತರ ಪ್ರಮುಖ ಶಿಲ್ಪಕಲಾ ಮಾದರಿಗಳು: ಮುಖ್ಯವಾಗಿ ಪ್ರಪಂಚದ ಪ್ರಾತಿನಿಧಿಕ ಶಿಲ್ಪಕಲಾ ಮಾದರಿ ಗಮನ ಸೆಳೆಯುವಂಥದ್ದು. ಈಜಿಪ್ಟ್‍ನ ಶಿಲ್ಪಕಲೆ ಕ್ರಿ.ಪೂ.ಸು.3000ದಲ್ಲಿ ಆರಂಭಗೊಂಡಿರಬಹುದು ಎಂದು ಹೇಳಲಾಗುತ್ತದೆ. ಈಜಿಪ್ಷಿಯನ್ ಶಿಲ್ಪಗಳು ಮರ ಹಾಗೂ ಕಲ್ಕೆತ್ತನೆಯ ಶಿಲ್ಪಗಳನ್ನು ಸತ್ತವರ ಸಮಾಧಿಯ ಪವಿತ್ರ ಗುರುತಿಗಾಗಿ ಇಟ್ಟಿದ್ದಾರೆ. ಅದು ಪುನರ್ಜನ್ಮದಲ್ಲಿ ಹಿಂದಿನ ನೆನಪು ಪಡೆಯಲು ಸಹಕಾರಿಯೆಂಬ ನಂಬಿಕೆ ಇದಕ್ಕೆ ಕಾರಣ. ರಾಜ ಮತ್ತು ಪ್ರಜೆಗಳ ನಡುವಿನ ಅಂತರವನ್ನು ಗುರುತಿಸಲು ರಾಜನ ವಿಗ್ರಹವನ್ನು ಎತ್ತರವಾಗಿ ಕಡೆಯುವುದು ಅವರ ಅಭ್ಯಾಸ. ಪರಂಪರಾನುಗತವಾಗಿ ಬಂದ ಅವರ ಶಿಲ್ಪಗಳನ್ನು ಗಮನಿಸಿದರೆ ಅವು ಶಾಂತವಾಗಿ, ವಿಶ್ರಾಂತ ಮುಖಭಂಗಿ ಯಲ್ಲಿ, ರಾಗರಹಿತವಾಗಿರುವುದು ಕಂಡುಬರುತ್ತದೆ. ವಾಸ್ತವ ಬದುಕಿನ ಭಾವಭಾವನೆಗಳ ಚಿತ್ರಣ ಶಿಲ್ಪಕಲೆಗೆ ಅಗತ್ಯವಿಲ್ಲ ಎಂಬುದು ಅವರ ನಂಬಿಕೆ. ಕ್ರಿ.ಪೂ. 2613-2498ಕ್ಕೆ ಸೇರಿದ ರಾಜ ಮೈಸೆರಿನಸ್ ಹಾಗೂ ಅವನ ರಾಣಿಯ ಶಿಲ್ಪ (ಬಾಸ್ಟನ್ ಮ್ಯೂಸಿಯಮ್‍ನಲ್ಲಿದೆ), ಕಂಚಿನ ನೃತ್ಯಗಾತಿಯ ಶಿಲ್ಪ (ಕಿ.ಪೂ. 2500-2000 ಮೊಹೆಂಜೊದಾರೊ) ಇವುಗಳ ಮುಖಭಾವ ಅವರ ಪ್ರಖ್ಯಾತ ಶಿಲ್ಪಮಾದರಿಗೆ ದ್ಯೋತಕ.  

	ಚೀನ : ಕ್ರಿ.ಪೂ. 8000-3000 ಅವಧಿಯ ನಿಯೋಲಿಥಿಕ್ ಗುಂಪಿಗೆ ಸೇರಿದ ಕುಂಚಕಲೆಯ ವರ್ಣಮಯ ಹಾಗೂ ನಾಜೂಕಾದ ಸೆರಾಮಿಕ್ ಸ್ಮರಣಿಕೆಗಳು, ಪಾತ್ರೆಗಳು ಚೀನದ ಸಾಂಪ್ರದಾಯಿಕ ಜೀವನಶೈಲಿಯ ಪ್ರಸಿದ್ಧ ಅಭಿವ್ಯಕ್ತಿಗಳಾಗಿವೆ. ಷಾಂಗ್ ಸಂತತಿಯ (ಕ್ರಿ.ಪೂ. ಸು. 1766-1122) ಕುಸುರಿಕಲಾ ನೈಪುಣ್ಯದ ಕಂಚಿನ ಶಿಲ್ಪಗಳಿಗೆ ಹಾಗೂ ಕೆತ್ತನೆ ಕೆಲಸಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಿದೆ. ಹಲವು ಲೋಹದ ತುಣುಕುಗಳನ್ನು ಬೆಸುಗೆ ಮಾಡಿ ಒಂದೇ ಕಲಾಕೃತಿಯನ್ನಾಗಿಸುವ ಕಲೆಗೆ ಈ ಕಾಲ ಪ್ರಸಿದ್ಧ. ಪಿತೃಪೂಜೆಗಳಿಗಾಗಿ ಬಳಸುವ ಪವಿತ್ರ ಪುರಾಣಕತೆಗಳ ಚಿತ್ರಗಳ ಕೆತ್ತನೆಯ ಪಾತ್ರೆಗಳು ಕುತೂಹಲಕರವಾಗಿವೆ. ಇಬ್ಬದಿಯ ಮುಖ ಕೆತ್ತನೆಗಳುಳ್ಳ ಚೀನ ಮತ್ತು ಭಾರತೀಯ ಶಿಲ್ಪಕಲಾಮಾದರಿಗಳನ್ನು ಹದಗೊಳಿಸಿದ ಶಿಲ್ಪಗಳು ಪ್ರಸಿದ್ಧವಾದವು. ಹ್ಯಾನ್ ಸಂತತಿಯ ಕಾಲದಲ್ಲಿ ದಕ್ಷಿಣ ಕೊರಿಯದಲ್ಲಿರುವ 600-700ಕ್ಕೆ ಸೇರಿದ ಕಂಚಿನ ಬುದ್ಧನ ಪ್ರತಿಮೆ, ಬೋರಬದೂರ್‍ನ ದೇವಾಲಯ ಸಂಕೀರ್ಣದಲ್ಲಿ ಸ್ಥಾಪಿತವಾಗಿರುವ ಕುಳಿತ ಬುದ್ಧ ಮತ್ತು ಕುಳಿತ ಬೋಧಿಸತ್ತ್ವನ ಶಿಲ್ಪಗಳು ಅವರ ಆಕರ್ಷಕ ಕಲಾ ಮಾದರಿಗಳು.

	ಆಫ್ರಿಕನ್ ಶಿಲ್ಪಕಲೆ:  ಮರ, ಜೇಡಿಮಣ್ಣು, ಲೋಹ, ಕಲ್ಲು, ದಂತ ಇತ್ಯಾದಿಗಳಲ್ಲಿ ದೊರೆತ  ಪಾರಂಪರಿಕ ವಸ್ತುವೈವಿಧ್ಯವುಳ್ಳ ಶಿಲ್ಪಕಲೆ ವಿಶಿಷ್ಟವಾದದ್ದು. ಈಜಿಪ್ಟ್‍ನಿಂದಾಚೆ ಆಫ್ರಿಕದ ಟೆರ್ರಕೋಟ ಶಿಲ್ಪಮಾದರಿ ಗಳು ಅತ್ಯಂತ ಪ್ರಸಿದ್ಧ. ಇವು ಕ್ರಿ.ಪೂ. 500ರ ಹೊತ್ತಿಗೆಲ್ಲ ಪ್ರಸಿದ್ಧಿಗೆ ಬಂದಂಥವು. ಸು. 1900ರವರೆಗೆ, ಅಂದರೆ ಪಾಶ್ಚಾತ್ಯರ ವಾಸ್ತವವಾದ ಶಿಲ್ಪಕಲೆಯ ಮೇಲೆ ಪ್ರಭಾವ ಬೀರುವವರೆಗೂ ಟೆರ್ರಕೋಟ ಮಾದರಿಗಳ ಸಹಜ ಸ್ವರೂಪ ಹಾಗೂ ಮಣ್ಣಿನ ಗುಣಕ್ಕೆ ಅತಿಹತ್ತಿರವಾದ ಲಕ್ಷಣಗಳು ಅತ್ಯಂತ ಪ್ರಸಿದ್ಧವಾಗಿದ್ದುವು. ಪಾಶ್ಚಾತ್ಯರ ಅಭಿಪ್ರಾಯದಲ್ಲಿ ಈ ಟೆರ್ರಕೋಟದ ಶಿಲ್ಪಮಾದರಿಗಳು ಅರ್ಥಮಾಡಿಕೊಳ್ಳಲು ಕ್ಲಿಷ್ಟ. ಗಮನಾರ್ಹ ಸಂಗತಿಯೆಂದರೆ, ಆಫ್ರಿಕನ್ನರು ತಮ್ಮ ಸಾಂಪ್ರದಾಯಿಕ ಶೈಲಿಗಳಾದ ಗೌರವ, ಭಯ, ಹರ್ಷ ಇತ್ಯಾದಿ ಭಾವನೆಗಳನ್ನು ಶಿಲ್ಪಕಲೆಯಲ್ಲಿ ಹಾಗೇ ಹಿಡಿದಿಡಲು ಹೆಚ್ಚು ಒಲವು ತೋರುತ್ತಾರೆ. ಆದ್ದರಿಂದಲೇ ಇವರ ಶಿಲ್ಪಕಲೆ ಅಪರೂಪವಾಗಿ ಕೆಲವೆಡೆ ಮಾತ್ರ ಪಾಶ್ಚಾತ್ಯ ಪ್ರಭಾವಕ್ಕೊಳಗಾಗಿ ಉಳಿದಂತೆ ಸಹಜ ಮಾದರಿಯನ್ನುಳಿಸಿಕೊಂಡಿವೆ. ಇವರ ನೃತ್ಯ ಮುಖವಾಡಗಳು (1900) ಅತ್ಯಂತ ವಿಶಿಷ್ಟವಾಗಿವೆ. ಜುಂಗು, ಮಣ್ಣು, ಬಟ್ಟೆ, ಹಲ್ಲು, ಮೇಣ ಹಾಗೂ ಗಾಜಿನ ತುಣುಕುಗಳಿಂದ ರಚಿತವಾದ ಇವನ್ನು ಗ್ರಾಮೀಣ ನೃತ್ಯಗಳಿಗೆ ಬಳಸಲಾಗುತ್ತದೆ. ಇವು ಆಫ್ರಿಕದ ಐವರಿಕೋಸ್ಟ್‍ನ ವಿ ಪೀಪಲ್ ಜನರ ಜನಪದ ವಿಶೇಷಗಳಾಗಿದ್ದು ಒಂದು ಸಮಾಜ ಸ್ವೀಕರಿಸಿದ ಹಾಗೂ ಸ್ವೀಕರಿಸದ ನಡವಳಿಕೆಗಳನ್ನು ಪ್ರತಿನಿಧಿಸುತ್ತವೆ.

	ಪೆಸಿಫಿಕ್ ದ್ವೀಪಗಳು: ಶಿಲ್ಪಕಲೆ ವಿಶೇಷವಾಗಿ ಮರ, ಕಲ್ಲು, ಸೆರಾಮಿಕ್, ತೊಗಟೆಯನಾರು, ಆಮೆಚಿಪ್ಪು, ನಾಯಿಹಲ್ಲು, ಜೇಡರಬಲೆ, ಜೊಂಡು ಮುಂತಾದವುಗಳಿಂದ ಬೆರಗುಗೊಳಿಸುವ ವೈವಿಧ್ಯ ಪಡೆದಿದೆ. ಅನಂತರ ಯುರೋಪಿಯನ್ ಸಾಮಗ್ರಿಗಳು ಅಲ್ಲಿಯ ಶಿಲ್ಪಕಾರರಿಗೆ ಸಿಗಲಾರಂಭಿಸಿದ ಕಾಲಕ್ಕೆ ಅಂದರೆ ಕನಿಷ್ಠ 100 ವರ್ಷಗಳಿಂದೀಚೆಗೆ ಅವರ ಜೀವನವಿಧಾನ ಹಾಗೂ ಶಿಲ್ಪಕಲೆ ಬದಲಾವಣೆಗೊಳಗಾಗಿದೆ. ವಿಶೇಷವಾಗಿ ಅವು ಮೃತ ಹಿರಿಯರು, ದೇವತೆಗಳು ಅಥವಾ ಭೂತಾದಿ ಗಳೇ ಮೊದಲಾದ ಅತೀಂದ್ರಿಯ ಶಕ್ತಿಗಳ ಶಿಲ್ಪಗಳಾಗಿರುತ್ತವೆ. ಮಾನವನ ಶರೀರವನ್ನು ತದ್ವತ್ತಾಗಿ ಕಡೆಯುವುದನ್ನು ಅಷ್ಟು ಮುಖ್ಯವೆಂದು ಭಾವಿಸದಿರುವುದೇ ಇದಕ್ಕೆ ಕಾರಣ. ಪೆಸಿಫಿಕ್ ದ್ವೀಪಗಳ ಅತಿಮುಖ್ಯ ಮೂರು ಪ್ರಾಂತಗಳಾದ ಮೈಕ್ರೋನೇಷಿಯ, ಪಾಲಿನೇಷಿಯ ಹಾಗೂ ಮೆಲನೇಷಿಯಗಳೆಲ್ಲದರಲ್ಲೂ ಈ ಗುಣಗಳು ಸ್ವಾಭಾವಿಕವಾದುದಾಗಿವೆ.

	ಅಮೆರಿಕನ್ ಇಂಡಿಯನ್ ಶಿಲ್ಪಗಳು: ಮರ ಹಾಗೂ ಇನ್ನಿತರ ವಸ್ತುಗ ಳಿಂದ ತಯಾರಾದ ಇಲ್ಲಿಯ ಶಿಲ್ಪಗಳು ತಾಳಿಕೆಯ ಗುಣದಿಂದ ನಿರ್ಮಿತ ವಾದವಲ್ಲ. ಯಾವತ್ತೂ ಲೂಟಿಕಾರರ ಹಾಗೂ ರಾಜಕೀಯ ಆಕ್ರಮಣಕಾರರ ದಾಳಿ ಯಾವುದೇ ಶಿಲ್ಪಕಲೆಗಳ ಮೇಲೆ ಆದಂತೆ ಇಲ್ಲಿಯೂ ಆಗಿದೆ. ಆದರೆ ಅಧ್ಯಯನಗಳು ಸೂಚಿಸುವಂತೆ, ಆಲ್ಮಿಕ್ ಮತ್ತು ಚಾವಿನ್ ಶಿಲ್ಪಮಾದರಿಗಳು ಅಧ್ಯಯನಯೋಗ್ಯವಾಗಿವೆ(ಕ್ರಿ.ಪೂ. ಸು. 1000). ಚಾವಿಯನ್ ಶೈಲಿಯ ಜಾಗರ್ ಪ್ರಕಾರಕ್ಕೆ ಸೇರಿದ ಕಲ್ಲಿನ ಕೆತ್ತನೆಯ ಆನೆಯಾಕಾರದ ಬಟ್ಟಲು ಹಾಗೂ ಕ್ರಿ.ಪೂ. ಸು. 800ಕ್ಕೆ ಸೇರಿದ ಆಲ್ಮಿಕ್ ಮನುಷ್ಯನ ತಲೆ ಇತ್ಯಾದಿ ಶಿಲ್ಪಗಳು ಪ್ರಖ್ಯಾತ ಸಾಕ್ಷಿಗಳಾಗಿ ಉಳಿದಿವೆ. ದಕ್ಷಿಣ ಮೆಕ್ಸಿಕೋ ಹಾಗೂ ಗ್ವಾಟೆಮಾಲದ ಮಾಯಾ ಸಂಸ್ಕøತಿ ಬರುವವರೆಗೆ ಆಲ್ಮಿಕ್ ಸಂಸ್ಕøತಿಯ ಪ್ರಭಾವ ಶಿಲ್ಪಗಳ ಮೇಲೆ ಆಳವಾಗಿತ್ತು. ಕೋಸ್ಟರಿಕ ಹಾಗೂ ನಿಕರಗುವ ಶಿಲ್ಪಗಳು ಸೆರಾಮಿಕ್ಸ್, ಮಣ್ಣು, ಜೇಡ, ಹದಗೊಳಿಸಿದ ಚಿನ್ನ ಹಾಗೂ ಕಲ್ಲಿನ ಮಿಶ್ರಣದಿಂದ ರಚಿಸಿದ ಶಿಲ್ಪಗಳು-ಮಾಯಾ ಸಂಸ್ಕøತಿಯ ಕುರುಹಾಗಿ ಉಳಿದಿವೆ.  ನೋಡುಗರನ್ನು ಸೆಳೆಯಬಲ್ಲ ಎಷ್ಟೋ ಕಲ್ಲಿನ ಶಿಲ್ಪಗಳು ಮೆಟೇಟ್ಸ್ ಎಂದು ಖ್ಯಾತವಾಗಿವೆ. ಪೆರುವಿಗೆ ಸೇರಿದ ಅನೇಕ ಕಲಾತ್ಮಕ ಹಾಗೂ ನಾಟಕೀಯ ಕುಸುರಿಗಳುಳ್ಳ ಪಾತ್ರೆಗಳು ಕೆತ್ತನೆಯ ಕೆಲಸಕ್ಕಾಗಿ ಆಕರ್ಷಕವಾಗಿವೆ. ಕ್ರಿ.ಪೂ. ಸು. 300 ರಿಂದ 200ರ ವರೆಗಿನ ಶಿಲ್ಪಗಳು ಹಾಗೂ ಕೆತ್ತನೆಗಳು ತಮ್ಮ ಕುಂಬಾರಿಕೆಗಾಗಿ ಖ್ಯಾತವಾಗಿವೆ.

	ರೋಮನ್ ಶಿಲ್ಪ:  ಪ್ರಾಚೀನ ರೋಮ್‍ನ ಶಿಲ್ಪಿಗಳು ವಿಶೇಷವಾಗಿ, ಉತ್ತರದ ಎಟ್ರುಸ್ಕಾನ್ ಹಾಗೂ ದಕ್ಷಿಣದ ಗ್ರೀಕ್ ವಲಸೆಗಾರರಿಂದ ಪ್ರಭಾವಿತರಾಗಿದ್ದರು. ಅನಂತರ ರೋಮ್ ಚಕ್ರಾಧಿಪತ್ಯ ಗ್ರೀಕ್ ಹಾಗೂ ಹೆಲೆನಿಸ್ಟಿಕ್ ಪ್ರಾಂತಗಳನ್ನು ವಶಪಡಿಸಿಕೊಂಡು ಗ್ರೀಕ್ ಶಿಲ್ಪಗಳನ್ನು ಸಾವಿರಾರು ಸಂಖ್ಯೆಯಲ್ಲಿ ಇಟಲಿಗೆ ತಂದರು. ಗ್ರೀಕರು ತಮ್ಮೊಂದಿಗೆ ಅಲೆಗ್ಸಾಂಡ್ರಿಯದ ಸಂಪೂರ್ಣ ಸುಸಂಸ್ಕøತಗೊಂಡ ಶಿಲ್ಪ ಮಾದರಿಗಳನ್ನೇ ತಂದರು. ರೋಮನ್ ಶಿಲ್ಪಗಳಲ್ಲಿ ಪ್ರತಿರೂಪ ಮಾದರಿಗಳೇ ಅಧಿಕ. ರೋಮ್ ಚಕ್ರವರ್ತಿ ಲೂಷಿಯಸ್ ವೆರೂಸ್‍ನ(ಕ್ರಿ.ಪೂ.161-69) ಶಿಲ್ಪ ಇದಕ್ಕೆ ಅತಿಶ್ರೇಷ್ಠ ಮಾದರಿ. ಅರಿಸ್ಟೋಫೆನೀಸ್ ತನ್ನ ಸಿಸಿರೋ, ಮಾರ್ಕಸ್ ಟ್ಯುಲಿಯಸ್ ಲೇಖನಗಳಲ್ಲಿ ಬಳಸಿಕೊಂಡಿರುವುದು ಈ ಮಾದರಿಗಳನ್ನೇ. ಅಗಸ್ಟಸ್ ಸೀಸರ್, ಜೂಲಿಯಸ್, ನಿರೋ ಮೊದಲಾದವರ ಶಿಲ್ಪಗಳು ಇನ್ನಿತರ ರೋಮನ್-ಗ್ರೀಕ್ ಶೈಲಿಯ ಪ್ರಖ್ಯಾತ ಶಿಲ್ಪಗಳು.

	ಗ್ರೀಕ್ ಶಿಲ್ಪ: ಇದು ಮೊದಮೊದಲಿಗೆ ಸರಳವೂ ಸಾಂಪ್ರದಾಯಿಕವೂ ಆಗಿತ್ತು. ಅನಂತರ ವಾಸ್ತವಾಂಶ ನಿರೂಪಣೆಗೆ ಒತ್ತು ಹೆಚ್ಚಾಗಿ ಮಾನವನ ಭಾವನೆಗಳ ಅಭಿವ್ಯಕ್ತಿಗೆ ಮಾರುಹೋಗಲಾಯಿತು. ಇದು ಸಾಧ್ಯವಾದದ್ದು ರೋಮನ್ ಶಿಲ್ಪ ಮಾದರಿ ಹಾಗೂ ಪುನರುತ್ಥಾನ ಕಾಲದ ಶಿಲ್ಪಗಳ ಪ್ರಭಾವದಿಂದ. ಇದು ಸು.1800ರವರೆಗೆ ಮುಂದುವರಿಯಿತು. ಗ್ರೀಕ್ ಕಲೆ ಮೂರು ರೀತಿ ಬೆಳೆವಣಿಗೆ ಕಂಡಿದೆ: 1. ಆರ್ಕೇಯಿಕ್ ಯುಗ (ಕ್ರಿ.ಪೂ. 630 ರಿಂದ 480), 2. ಶ್ರೇಷ್ಠ ಶಿಲ್ಪ ಮಾದರಿ ಯುಗ(ಕ್ರಿ.ಪೂ. 323-3), ಹೆಲನಿಸ್ಟಿಕ್ ಯುಗ(ಕ್ರಿಪೂ. 146 ಅಂತ್ಯ).

	ಆರ್ಕೇಯಿಕ್ ಯುಗದ ಶಿಲ್ಪಗಳು ಪಾಶ್ಚಾತ್ಯ ರಾಷ್ಟ್ರಗಳ ಮಾದರಿಯ ಡೆಡ್ಯಾಲಿಕ್ ಶೈಲಿಗೆ ಉದಾಹರಣೆ. ಅನಂತರ ಬಹುಶಃ ಕ್ರಿ.ಪೂ. 480ರ ವೇಳೆಗೆ ಈಜಿಪ್ಷಿಯನ್ ಮಾದರಿಗೆ ಮಾರು ಹೋಗಿ ನಗ್ನ ಶಿಲ್ಪಗಳು (ಕೌರಾಯಿ) ಹಾಗೂ ವಸ್ತ್ರಸಹಿತ(ಕೊರಾಯಿ) ಮಾದರಿಗಳೆಂದು ಕರೆಯುವ ಶಿಲ್ಪಗಳು ಕಂಡುಬಂದುವು.

	ಕ್ಲಾಸಿಕಲ್ ಯುಗ ಅಥವಾ ಶ್ರೇಷ್ಠಶಿಲ್ಪಮಾದರಿ ಯುಗದಲ್ಲಿ ಆಳವಾಗಿ ಕೆತ್ತಿದ ಆಭರಣಗಳು, ನೆರಿಗೆಯುಳ್ಳ ವಸ್ತ್ರಗಳು ಗಮನಾರ್ಹವಾದವು. ಅಪೋಲೋ ಶಿಲ್ಪ, ಅಥೆನ್ಸ್‍ನ ಪ್ಯಾಥೆನಾನ್ ಶಿಲ್ಪ ಈ ಮಾದರಿಯವೇ.

ಕಾಲಸಂದಂತೆ ಪ್ರಪಂಚದ ನಾನಾ ಭಾಗಗಳ ಶಿಲ್ಪಕಲಾ ಮಾದರಿಗಳು ಒಂದರ ಪ್ರಭಾವದಿಂದ ಮತ್ತೊಂದು ಕಳೆಗೊಂಡು ಒಂದು ಮಿಶ್ರಮಾಧುರ್ಯವನ್ನು ಶಿಲ್ಪಕಲೆಗೆ ನೀಡಿವೆ. ವಾಸ್ತುಕಲೆಯೊಂದಿಗೆ ಶಿಲ್ಪಕಲೆಯೂ ಆಧುನಿಕ ಪ್ರಪಂಚದ ಹೊಸಮೋಡಿಗೆ ಒಳಗಾಗಿ ನವನವೀನ ತಾಂತ್ರಿಕ ಕೌಶಲಗಳನ್ನು ಗರ್ಭೀಕರಿಸಿಕೊಂಡು ಬೆಳೆಯುತ್ತಿದೆ.	(ಜಿ.ಎನ್.ಎಸ್.) 

	ಕರ್ನಾಟಕದಲ್ಲಿ ವಾಸ್ತುಕಲೆ ವೈವಿಧ್ಯಮಯವಾಗಿರುವಂತೆ ಶಿಲ್ಪಕಲೆಯೂ ತನ್ನ ವಿಸ್ತಾರವಾದ ಹಲವು ರೀತಿಯ ಬೆಳೆವಣಿಗೆಯನ್ನು ಕಂಡಿದೆ. ಜೊತೆಗೆ ನವಶಿಲಾಯುಗದ ಕಾಲದಿಂದಾರಂಭಿಸಿ ಆಧುನಿಕ ಯುಗದವರೆಗೂ ಅವಿಚ್ಛಿನ್ನವಾಗಿ ಬೆಳೆದುಬಂದ ಪರಂಪರೆ ಇದಕ್ಕಿದೆ.

	ಶಿಲ್ಪವನ್ನು ರೂಪಿಸುವಲ್ಲಿ ಜೇಡಿ, ಗಚ್ಚು, ಮರ, ಲೋಹ, ಶಿಲೆ ಮೊದಲಾದವುಗಳನ್ನು ಉಪಯೋಗಿಸಲಾಗಿದ್ದು ಅಪರೂಪವಾಗಿ ದಂತವನ್ನೂ ಬಳಸಿರುವುದು ಕಂಡುಬರುತ್ತದೆ. ಅವುಗಳಲ್ಲೆಲ್ಲ ಹೇರಳವಾಗಿ ರುವುದು ಕಲ್ಲಿನಲ್ಲಿ ಕಂಡರಿಸಿರುವ ಶಿಲ್ಪ. ಆದರೆ ಅತಿ ಪ್ರಾಚೀನವಾದುದು ಜೇಡಿ ಅಥವಾ ಮಣ್ಣಿನದು. ಚರಿತ್ರ ಪೂರ್ವಕಾಲದ ನವಶಿಲಾಯುಗದ ಲ್ಲಿಯೇ ಮೃಣ್ಮೂರ್ತಿಗಳನ್ನು ತಯಾರಿಸಿರುವುದು ಹಲವು ಪುರಾತನ ನಿವೇಶನಗಳಿಂದ ವ್ಯಕ್ತವಾಗಿದೆ. ಕುಪ್ಪಗಲ್ಲು, ಬ್ರಹ್ಮಗಿರಿ, ಪಿಕ್ಲಿಹಾಳು, ಸಂಗನಕಲ್ಲು, ತೆಕ್ಕಲಕೋಟೆ, ಹರವಗೇರಿ, ಬೋರ್ಗಿ ಮೊದಲಾದ ಕಡೆ ನಡೆಸಿದ ಪರಿವೀಕ್ಷಣೆ ಹಾಗೂ ಉತ್ಖನನಗಳಲ್ಲಿ ಇಂಥ ಮಣ್ಣಿನಲ್ಲಿ ಮಾಡಿದ ಕಿರುಮೂರ್ತಿಗಳ ಅವಶೇಷಗಳು ದೊರೆತಿವೆ. ಇವು ಪೂರ್ಣ ರೂಪದಲ್ಲಿ ದೊರೆತಿರುವುದು ಅಪರೂಪ. ಪ್ರಾಣಿ, ಪಕ್ಷಿ ಅಥವಾ ಮಾನವನ ರೂಪಿನ ಈ ಮೃಣ್ಮೂರ್ತಿಗಳು ಕೈಯಿಂದಲೇ ತಯಾರಿಸಿದ ಮೂರ್ತಿಗಳಾಗಿದ್ದು ಕಣ್ಣು ಕಿವಿ ಮೂತಿಗಳು ಸ್ಪಷ್ಟವಾಗಿರುವುದಿಲ್ಲ. ಇವು ಕಣ್ಣಿಗೆ ಒಂದು ಗುಂಡುಗೆರೆ, ಬೆಟ್ಟುಗಳಿಂದ ಚಿವುಟಿ ಮಾಡಿದ ಕಿವಿಮೂಗುಗಳು, ಗುಂಡಾಗಿ ನೇರವಾಗಿ ಮೇಲೆ ದಪ್ಪನಾಗಿ ಇಳಿಯುತ್ತ ಸಣ್ಣಗಾಗುವ ಕಾಲುಗಳನ್ನು ಹೊಂದಿರುತ್ತವೆ. ಪ್ರಾಣಿಗಳಲ್ಲಿ ಹೆಚ್ಚಾಗಿ ಕಂಡುಬರುವುದು ಹಸು ಅಥವಾ ಗೂಳಿ. ಪಿಕ್ಲಿಹಾಳಿನಲ್ಲಿ ದೊರೆತಿರುವ ಒಂದೆರಡು ಗೂಳಿಗಳು ದಷ್ಟಪುಷ್ಟವಾಗಿದ್ದು ತಮ್ಮ ಆಕಾರದಲ್ಲಿ ಮೊಹೆಂಜೊದಾರೊ ಗೂಳಿಗಳನ್ನು ಹೋಲುತ್ತವೆ. ಉನ್ನತವಾದ ಹಿಣಿಲು, ಹರವಾಗಿ ಇಳಿಬಿದ್ದಿರುವ ಬಾಲ, ತೆಳುನಡು ಮೊದಲಾದ ಭಾಗಗಳ ಆಕಾರ ಕೊಟ್ಟಿರುವಲ್ಲಿ ಕಲೆಗಾರಿಕೆ ಎದ್ದುಕಾಣುತ್ತದೆ. ಉತ್ತರ ಭಾರತ ದೊಡನೆ ಹೋಲಿಸಿದರೆ ಇಲ್ಲಿಯ ಮೃಣ್ಮೂರ್ತಿಗಳು ಸಂಖ್ಯೆಯಲ್ಲಿ ತೀರ ಕಡಿಮೆ. ಹಸಿಮಣ್ಣಿನಲ್ಲಿ ತಯಾರಿಸಿ ಅನಂತರ ಆವುಗೆಯಲ್ಲಿ ಸುಟ್ಟಿರುವ ಈ ಮೂರ್ತಿಗಳು ಗಟ್ಟಿಯಾಗಿವೆ.

	ನವಶಿಲಾಯುಗ ಮತ್ತು ಬೃಹತ್ ಶಿಲಾಯುಗದ ಕಾಲದಲ್ಲಿ ಬಂಡೆಗಳ ಮೇಲೆ ಪ್ರಾಣಿಗಳ ಮಾನವರ ರೂಪರೇಖೆಗಳನ್ನು ಸುತ್ತಿಗೆಯಿಂದ ಕುಟ್ಟಿ, ತೆಳುವಾಗಿ ಗೀರು ಕೊರೆದಂತೆ ಬಿಡಿಸಿರುವುದು ಕುಪ್ಪಗಲ್ಲು, ತೆಕ್ಕಲಕೋಟೆ, ತವರಗೆರೆ, ಕಲ್ಲೋಳಿ, ಪಿಕ್ಲಿಹಾಳು, ಮಸ್ಕಿ, ಚಿತ್ರದುರ್ಗ ಮೊದಲಾದೆಡೆ ಕಂಡುಬಂದಿವೆ. ಇವು ಸಾಮಾನ್ಯವಾಗಿ ಪ್ರಾಣಿಗಳ, ಮುಖ್ಯವಾಗಿ ಗೂಳಿಗಳ ಆಕೃತಿಗಳು. ಆಗಿನ ಕಾಲದಲ್ಲಿ ರಚಿತವಾದ ಬಂಡೆಗಳ ಮೇಲಿನ ವರ್ಣಚಿತ್ರವನ್ನೆ ಅನುಕರಿಸಿರುವ ಇವು ಕಲ್ಲಿನ ಶಿಲ್ಪದ ಆರಂಭದೆಸೆ ಎನ್ನಬಹುದು. ಹೀಗೆ ಬಿಡಿಸಿರುವ ಗೂಳಿಗಳಿಗೆ ನೀಳವಾದ ಕೊಂಬುಗಳು, ಉಬ್ಬಿದ ಹಿಣಿಲು ಇದ್ದು ಕೆಲವು ವೇಳೆ ಇಳಿಬಿದ್ದ ಗಂಗೆದೊಗಲೂ ಇರುವುದುಂಟು. ಮಸ್ಕಿಯಲ್ಲಿ ಬಂಡೆಯೊಂದರ ಮೇಲಿರುವ ಒಂದು ಗುಂಪುಗೂಳಿಗಳಿಗೆ ಕಡ್ಡಿ ಕಾಲುಗಳು, ನೀಳ ತೆಳುದೇಹ, ಸ್ವಲ್ಪಮಟ್ಟಿಗೆ ಎತ್ತಿದಂತಿರುವ ನೇರ ಬಾಲ, ಮುಂಚಾಚಿರುವ ನೀಳ ಕೊಂಬುಗಳಿದ್ದು ಒಂದೇ ದಿಕ್ಕಿನಲ್ಲಿ ಚಲಿಸುತ್ತಿರುವ ಇವು ಜಡವಲ್ಲ ಎನ್ನುವುದನ್ನು ಸೂಚಿಸುತ್ತದೆ. ಚಂದ್ರವಳ್ಳಿ ಬಳಿ ಬಂಡೆಯ ಮೇಲಿರುವ ಹುಲಿಯ ದೇಹದ ಮೇಲೆ ಪಟ್ಟೆಯನ್ನು ಅಡ್ಡಾದಿಡ್ಡಿ ಗೀರುಗಳ ಮೂಲಕ ತೋರಿಸುವ ಪ್ರಯತ್ನ ಇದೆ. ಚಿತ್ರದುರ್ಗ ಬೆಟ್ಟದ ಮೇಲಿನ ಜಿಂಕೆ ಕಾಡುಕೋಣಗಳಲ್ಲಿ ಅವುಗಳ ಸ್ವಭಾವವನ್ನು ಸೆರೆಹಿಡಿದಿರುವುದನ್ನು ನೋಡಬಹುದು.

	ಇತಿಹಾಸದ ಆರಂಭಕಾಲಕ್ಕೆ ಎಂದರೆ, ಕ್ರಿ.ಪೂ. ಸು. 1ನೆಯ ಶತಮಾನದಿಂದ 3-4ನೆಯ ಶತಮಾನಗಳ ಕಾಲಕ್ಕೆ ಸೇರಿದ ಸನ್ನತಿಯ ನಿವೇಶನದಲ್ಲಿ, ಬನವಾಸಿಯಲ್ಲಿ ಕಿರುಪ್ರಮಾಣದ ಮೃಣ್ಮೂರ್ತಿಗಳು ದೊರೆತಿವೆ. ಇವು ಅಚ್ಚಿನಲ್ಲಿ ಮಾಡಿದವು; ಕೆಲವು ಟೊಳ್ಳಾಗಿವೆ. ಯಕ್ಷಯಕ್ಷಿಯರು, ಹುಲಿ, ಕುದುರೆ, ಆನೆ, ಹೋರಿ ಮೊದಲಾದ ಈ ಕಿರುಮೂರ್ತಿಗಳಲ್ಲಿ ಅಂಗಾಂಗಗಳನ್ನು ಸೂಕ್ಷ್ಮವಾಗಿ ಬಿಡಿಸಿದ್ದು ಇವು ಉತ್ತಮ ಮಟ್ಟದ ಮೂರ್ತಿಗಳಾಗಿವೆ. ಸಾಮಾನ್ಯವಾಗಿ ಇವು ಆಟಿಕೆಗಳಾಗಿದ್ದು ಕೆಲವು ತಂತ್ರಕ್ಕೆ ಸಂಬಂಧಿಸಿದುವೆಂದು ಹೇಳಬಹುದು. ಕಲ್ಲಿನಲ್ಲಿ ಕಂಡರಿಸಿದ ಬೌದ್ಧ ಶಿಲ್ಪಗಳು ದೊರೆತಿರುವುದೂ ಇಲ್ಲಿಯೇ. ಇವು ಕರ್ನಾಟಕದಲ್ಲಿ ಅತಿ ಪ್ರಾಚೀನವಾದ ರೂಪು ಬಿಡಿಸಿದ ಶಿಲ್ಪಗಳೂ ಹೌದು. ಶಿಲ್ಪಕ್ಕೆ ಅಷ್ಟೇನೂ ಅನುಕೂಲವಲ್ಲದ ಹಸುರು ಬೆರೆತ ಬಿಳಿಯ ಸುಣ್ಣಕಲ್ಲಿನ ಹಲಗೆಗಳ ಮೇಲೆ ಬಿಡಿಸಿರುವ ಬುದ್ಧನ ಜೀವನ ಕಥೆಗಳೂ ಹಲವು ಬಗೆಯ ಸಾಂಸಾರಿಕ ಚಿತ್ರಣಗಳೂ ಪ್ರಾಣಿಗಳೂ ತೆಳುವಾಗಿ ಬಿಡಿಸಲಾಗಿದ್ದು ಅತ್ಯಂತ ಆಕರ್ಷಕವಾಗಿವೆ. ನಂದಿವಿಶಾಲ ಜಾತಕ, ಬುದ್ಧನ ಜನನ ಸಂದರ್ಭಗಳು, ಅತ್ಯಂತ ಸ್ವಾಭಾವಿಕ ಕಂಡರಣೆಗೊಂಡ ಕೋಣ, ಕುದುರೆಗಳು, ಆಯಕ ಸ್ತಂಭವೊಂದರ ಮೇಲಿರುವ ಸುಖಸಂತೃ ಪ್ತಿಯಿಂದ ಮಂದಸ್ಮಿತವದನರಾಗಿ ನವುರಾದ ಭಾವನೆಯನ್ನು ವ್ಯಕ್ತ ಪಡಿಸುವ ದಂಪತಿಗಳ ಛಾಯಾಶಿಲ್ಪ ಮೊದಲಾದುವು ಅಮರಾವತಿ ಶಿಲ್ಪವನ್ನು ನೆನಪಿಗೆ ತರುವ ಸಾತವಾಹನ ಶಿಲ್ಪಗಳ ಶ್ರೇಷ್ಠ ಮಾದರಿಗಳು. ಇವು ಆಗಲೇ ಪ್ರಚಲಿತವಿದ್ದ ಒಂದು ಶಿಲ್ಪಶೈಲಿಯ ಪರಂಪರೆಗೆ ಸೇರಿದುವು.

	ಗ್ರಾಮದೇವತೆಗಳು, ಸಪ್ತಮಾತೃಕೆಯರು ಮೊದಲಾದ ಶಕ್ತಿದೇವತೆ ಗಳ ಪೂಜೆಯ ಅಂಗವಾಗಿ ಆ ದೇವತೆಗಳ ಬೃಹದಾಕಾರದ ಮೂರ್ತಿಗಳನ್ನು ಮಣ್ಣಿನಲ್ಲಿಯೇ ನಿರ್ಮಿಸಿ ಬಣ್ಣ ಹಾಕುವ ಪದ್ಧತಿ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಈಗಲೂ ಉಳಿದು ಬಂದಿದ್ದು ಇದರೊಂದಿಗೆ ಭೂತಪೂಜೆಯ ಅಂಗವಾಗಿ ಹಲವು ಬಗೆಯ ಪ್ರಾಣಿಗಳ ಮತ್ತು ಮಾನವರ ಮೂರ್ತಿಗಳನ್ನು ಮರದಿಂದ ನಿರ್ಮಿಸಿ ಬಣ್ಣ ಹಾಕಿಟ್ಟು ಪೂಜಿಸುವ ಪದ್ಧತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿದೆ. ಉದ್ಯಾವರ, ಪೊಳಲಿ, ಮೂಡಬಿದರೆ, ಬಾರಕೂರು, ಅನಂತಪುರ ಮುಂತಾದ ಕಡೆಗಳಲ್ಲಿ ಇರುವ ಬೃಹದಾಕಾರದ ಮೃಣ್ಮೂರ್ತಿಗಳೂ ಮೆಕ್ಕೆಕಟ್ಟೆ ಮತ್ತು ಇತರೆಡೆಗಳಲ್ಲಿ ಚಿತ್ರವಿಚಿತ್ರವಾದ ದಾರುಮೂರ್ತಿಗಳೂ ಈಗ ಇರುವ ಸ್ಥಿತಿಯಲ್ಲಿ ಎಷ್ಟು ಹಿಂದಿನವೆಂದು ಹೇಳಲಾಗದಿ ದ್ದರೂ ಬಹು ಪ್ರಾಚೀನ ಕಾಲದಿಂದ ಇಂಥ ಮೂರ್ತಿಗಳನ್ನು ರಚಿಸುವ ಪದ್ಧತಿ ಅನೂಚಾನವಾಗಿ ನಡೆದುಕೊಂಡು ಬಂದಿರಬೇಕು. ಇವು ಮುಖ್ಯವಾಗಿ ತಂತ್ರಕ್ಕೆ ಸಂಬಂಧಿಸಿದ ಮೂರ್ತಿಗಳಾಗಿದ್ದು ಈ ಶಕ್ತಿದೇವತೆಗಳಲ್ಲಿ ಕೆಲವು ಅಂಗಗಳನ್ನು ಪ್ರಮುಖವಾಗಿ ತೋರಿಸಿರುವುದುಂಟು-ಮುಖದಲ್ಲಿ ಗಂಭೀರತೆ, ದೊಡ್ಡ ಕಣ್ಣುಗಳು, ದಪ್ಪನೆಯ ಬಿಗಿದ ತುಟಿ ಅಥವಾ ಚಾಚಿದ ನಾಲಗೆ, ಕೋರೆಹಲ್ಲುಗಳು, ಮಾತೃದೇವತೆಗಳ ಸೂಚಕವಾಗಿ ಬೃಹದ್ವಕ್ಷಗಳು ಭಯಮಿಶ್ರಿತ ಗೌರವ ಹುಟ್ಟಿಸುವಂತಿರುತ್ತವೆ.  ದೈವಗಳ ಪ್ರತಿಕೃತಿಗಳಾದ ಬಗೆಬಗೆಯ ಮಾನವ, ಪ್ರಾಣಿಗಳಲ್ಲಿ ಸೆಟೆದಂತೆ ಇರುವ ಭಂಗಿ, ಒಂದು ಬಗೆಯ ಜಡಭಾವನೆ ಎದ್ದುಕಾಣುತ್ತವೆ. ಮುಖ್ಯವಾಗಿ ಇಲ್ಲಿಯ ಗೂಳಿಗಳು ಕಡ್ಡಿಕಾಲುಗಳು, ಕೊಳಗದಂತಹ ದೇಹ, ನೇರವಾಗಿ ಮುಂಚಾಚಿದ ಮೂರ್ತಿಗಳನ್ನು ಹೊಂದಿದ್ದು ಇವುಗಳಲ್ಲಿ ನವಶಿಲಾಯುಗದ ರೇಖಾಶಿಲ್ಪದ ಗೂಳಿಗಳ ಮಾದರಿಗಳನ್ನು ಕಾಣಬಹುದು.

	ಬಾದಾಮಿ ಚಳುಕ್ಯರ ಕಾಲದಲ್ಲಿ ಮೊದಲ ಬಾರಿಗೆ ಬೃಹತ್ ಪ್ರಮಾಣ ದಲ್ಲಿ ವಾಸ್ತು ಶೈಲಿಗಳ ಪ್ರಯೋಗ ನಡೆದಂತೆ ಶಿಲ್ಪಿಗಳ ಬೆಳೆವಣಿಗೆಯೂ ಕಂಡುಬರುತ್ತದೆ. ಬಾದಾಮಿ, ಐಹೊಳೆ, ಪಟ್ಟದಕಲ್ಲು ಮೊದಲಾದ ಕಡೆ ಇವರು ಕೊರೆಸಿದ ಗುಹೆಗಳು, ಕಟ್ಟಿಸಿದ ದೇವಾಲಯಗಳಿಗೆ ಪೂರಕವಾಗಿ ಆಲಂಕಾರಿಕವಾಗಿ ಮೂರ್ತಿಶಿಲ್ಪಗಳನ್ನು ಬಳಸಿದ್ದಾರೆ. ಗುಪ್ತರ ಕಾಲದಲ್ಲಿ ಉತ್ತರ ಭಾರತದಲ್ಲಿ ಅದ್ಭುತವಾಗಿ ನಡೆದ ಶಿಲ್ಪ ಪ್ರಯೋಗ ಇವರಿಗೆ ಸ್ಫೂರ್ತಿ ನೀಡಿರಬೇಕು. ಇವರ ಶಿಲ್ಪಗಳಲ್ಲಿ ಸ್ಥಳೀಯವಾಗಿ ಪೂರ್ವಮಾದರಿ ಇಲ್ಲದೆ ಸ್ವತಂತ್ರವಾಗಿ ಕಂಡರಿಸಿರಬಹು ದಾದ ಶಿಲ್ಪ ಮಾದರಿಗಳ ಜೊತೆಜೊತೆಯಾಗಿ ಗುಪ್ತಶೈಲಿಯ ಸೊಗಸನ್ನೂ ಸೂಕ್ಷ್ಮವಾಗಿ ಗಮನಿಸಬಹುದು. ಲಾಡಖಾನ್ ಗುಡಿ, ಕೊಂತಿಗುಡಿ, ಹುಚ್ಚಮಲ್ಲಿಗುಡಿ ಮೊದಲಾದ ಇವರ ಆರಂಭಕಾಲದ ಕಟ್ಟಡಗಳಲ್ಲಿ ಕಂಡುಬರುವ ಕೇವಲ ಕೆಲವೇ ಶಿಲ್ಪಗಳು ಈ ಕಾಲದ ಮೊದಲ ಪ್ರಯತ್ನಗಳೆಂಬುದು ಸ್ಪಷ್ಟ. ಇಲ್ಲಿನ ದೇವತಾಮೂರ್ತಿಗಳೂ ಪರಿವಾರದೇ ವತೆಗಳೂ ತೀರ ಸರಳವಾಗಿದ್ದರೂ ವೀರ್ಯವತ್ತಾಗಿ ಭಾವಯುಕ್ತವಾಗಿವೆ. ಇವುಗಳನ್ನು ಕಂಡರಿಸುವಲ್ಲಿ ಅವಕ್ಕೆ ಜೀವ ತುಂಬುವಲ್ಲಿ ರೂವಾರಿ ಪೂರ್ಣ ಸ್ವಾತಂತ್ರ್ಯವಹಿಸಿದ್ದಾನೆ. ಗುಹಾವಾಸ್ತುವಿನಲ್ಲಿ ಶಿಲ್ಪದ ಅತ್ಯಂತ ಸಮರ್ಥವಾದ ಬಳಕೆ ಕಂಡುಬರುತ್ತದೆ. ಗುಹೆಯ ಮುಂದಣ ಕೈಸಾಲೆಗಳ ಇಕ್ಕೆಲಗಳಲ್ಲಿ ಬಹುಮಟ್ಟಿಗೆ ಗೋಡೆಗಳ ಪೂರ್ಣಭಾಗವನ್ನು ಆಕ್ರಮಿಸು ವಂತೆ ಹೆಚ್ಚು ಉಬ್ಬಿದ ಶಿಲ್ಪದಲ್ಲಿ ಕಂಡರಿಸಿರುವ ದೇವಮೂರ್ತಿಗಳು ದೃಢತೆ, ಶಕ್ತಿ, ವ್ಯಾಪಕತೆಗಳ ಸಂಕೇತವಾಗಿವೆ. ಹದಿನೆಂಟು ಕೈಗಳುಳ್ಳ ನಟರಾಜನ ಬಿರುಸಿನ ಚಲನೆಯನ್ನು ಆ ಕೈಗಳ ವಿನ್ಯಾಸ ತೋರಿಸಿದರೆ, ಮುಖದಲ್ಲಿ ಅದ್ಭುತವಾದ ಶಾಂತಚಿತ್ತತೆ, ಒಳಮುಖದೃಷ್ಟಿಯ ಮಂದಹಾಸ, ತನ್ನ ಸಾಧನೆಯಲ್ಲಿ ಅಲಕ್ಷ್ಯಭಾವ ಮಿನುಗುತ್ತದೆ. ಇದೇ ರೀತಿ ಮಹಿಷಮರ್ದಿನಿ, ಅರ್ಧನಾರೀಶ್ವರ, ತ್ರಿವಿಕ್ರಮ, ನರಸಿಂಹ, ಹರಿಹರ ಮೂರ್ತಿಗಳು ದೈವೀಶಕ್ತಿಯ ಪ್ರತೀಕಗಳು. ಇಲ್ಲಿಯ ಮತ್ತೊಂದು ವಿಶೇಷವೆಂದರೆ ಈ ಬೃಹತ್ ಶಕ್ತಿಯ ವ್ಯಾಪಕತೆಯನ್ನು ಪ್ರದರ್ಶಿಸುವಂತೆ ಅವುಗಳ ಸುತ್ತಲೂ ಇರುವ ಕಿರುಪ್ರಮಾಣದ ಪರಿವಾರದೇವತೆಗಳ  ಮೂರ್ತಿಗಳಲ್ಲಿ ಅಂತಃಸತ್ವ ಪೂರ್ಣವಾಗಿ ಹೊಮ್ಮಿದೆ. ಈ ಕಾಲದ ಶಿಲ್ಪದಲ್ಲಿ ಬೃಹದ್ಗಾತ್ರದ ಜೊತೆಗೆ ಸ್ಥೂಲದ ಭಾವನೆ ಬರುತ್ತದೆ. ಆಕಾರ ಹೆಚ್ಚು ಗುಂಡು; ಗೋಡೆಗೆ ಅಂಟಿಕೊಂಡಿದ್ದರೂ ಗೋಡೆಯನ್ನು ಬಿಟ್ಟು ಹೊರಹೊಮ್ಮಿರುವಂತೆ ಉಬ್ಬಿಸಿ ಕಂಡರಿಸಿರುವುದೇ ಹೆಚ್ಚು. ಮೂರನೆಯ ಗುಹೆಯ ಸ್ತಂಭಗಳ ಮೇಲಿರುವ ಮನೋಹರವಾದ ಸಾಲಭಂಜಿಕೆಗಳು ಮತ್ತು ದಂಪತಿ ವಿಗ್ರಹಗಳು ಕರ್ನಾಟಕದಲ್ಲಿ ಅತಿ ಸಮರ್ಥವಾಗಿ ಕಂಡರಿಸಿರುವ ಮೂರ್ತಿಶಿಲ್ಪದಲ್ಲಿ ಕೆಲವು. ಲೌಕಿಕ ವ್ಯವಹಾರಕ್ಕೆ ಸಂಬಂಧಿಸಿದಂತೆ ಶಿಲ್ಪಿಸಿರುವ ಈ ಮೂರ್ತಿಗಳಲ್ಲಿ ನವುರಾದ ಸಂವೇದನಾಶೀಲತೆಯನ್ನು ಹೊಮ್ಮಿಸಿರುವ ಸೌಂದರ್ಯ ಬೆರಗುಗೊಳಿಸು ವಂಥದು. ಪ್ರತಿಯೊಂದು ಚಲನೆಯ ಪ್ರತಿಯೊಂದು ಭಂಗಿಯ ಪೂರ್ಣ ಅರ್ಥವನ್ನು, ನವುರಾದ ಭಾವನೆಗಳನ್ನು ಒಂದು ಕೊಂಕಿನಲ್ಲಿ, ಒಂದು ಬಳುಕಿನಲ್ಲಿ ಸೆರೆಹಿಡಿದು ರಸಭಾವಗಳನ್ನು ತುಂಬಿರುವ ರೂವಾರಿಗಳ ಜಾಣ್ಮೆ ಆಶ್ಚರ್ಯಕರವಾದುದು. ಇಲ್ಲಿಯ ದಂಪತಿ ವಿಗ್ರಹಗಳಲ್ಲಿ ಗಂಡಿನ ಹಿಡಿತದಲ್ಲಿ ಹೆಣ್ಣು ನಾಚಿ ನೀರಾಗಿರುವುದು, ಮುಖಭಾವದಲ್ಲಿ ಸುಖಸಂವೇದನೆ ಚಿಮ್ಮುತ್ತಿರುವುದು, ಅಂಗಸೌಷ್ಠವ, ಬೆಡಗುಬಿನ್ನಾಣಗಳು, ಅದಕ್ಕೆ ಪೂರಕವಾಗಿರುವ ಕೆಲವೇ ಆಭರಣಗಳು ಇರುವಂತೆ ಆಸಕ್ತಿ ಯಿಂದ ಹೊಮ್ಮಿಸುವಲ್ಲಿ ರೂವಾರಿ ಭಾವುಕನಾಗಿದ್ದಾನೆ, ಕವಿಯಾಗಿದ್ದಾನೆ. ಇಲ್ಲಿಯ ಹಾಸ್ಯಬೆರೆತ ಕುಬ್ಜರ ಸಾಲುಗಳು, ಚಾವಣಿಯಲ್ಲಿ ತೇಲಿಹೋಗು ವಂತೆ ಕಂಡರಿಸಿರುವ ಯಕ್ಷಯಕ್ಷಿಣಿಯರು, ನಾಗನಾಗಿಣಿಯರು, ಗಂಧರ್ವ ದಂಪತಿಗಳು, ಅಷ್ಟದಿಕ್ಪಾಲಕರು ಆಕರ್ಷಣೀಯವಾದುವು. ಈ ಮೂರ್ತಿ ಗಳಿಗೆ ಗುಂಡುಮುಖ, ತುಂಬುಗಲ್ಲ, ಮೋಹಕ ಕಣ್ಣುಗಳು, ಹಸನ್ಮುದ್ರೆ, ದಪ್ಪ ತುಟಿ, ವಿಶಾಲವಾದ ಎದೆ, ದೃಢಕಾಯ ಮತ್ತು ಹಿತಮಿತ ಅಲಂಕರಣಗಳಿವೆ. ವಿಕ್ರಮಾದಿತ್ಯನ ಕಾಲಕ್ಕೆ ಇಲ್ಲಿ ದ್ರಾವಿಡ ಶಿಲ್ಪದ ಪ್ರಭಾವವೂ ಕಂಡುಬರುತ್ತದೆ. ದೇವಾಲಯಗಳಲ್ಲಿ ರಾಮಾಯಣ, ಪಂಚತಂತ್ರ ಮೊದಲಾದ ಕಥನ ಶಿಲ್ಪಗಳೂ ಆರಂಭವಾಗುತ್ತವೆ.

	ರಾಷ್ಟ್ರಕೂಟರು ಬಾದಾಮಿ ಚಳುಕ್ಯರ ಶೈಲಿಯನ್ನು ಮುಂದುವರಿಸಿದರು; ಪ್ರೌಢವಾಗಿ ಬೆಳೆಸಿದರು. ಕರ್ನಾಟಕದಲ್ಲಿ ಇವರ ಶಿಲ್ಪ ಹೆಚ್ಚಾಗಿಲ್ಲದಿದ್ದರೂ ಎಲ್ಲೋರ, ಎಲಿಫೆಂಟಗಳಲ್ಲಿ ಇವರ ಶಿಲ್ಪದ ಪರಾಕಾಷ್ಠೆಯನ್ನು ಕಾಣಬಹುದು. ಎಲ್ಲೋರದ ಗುಹೆಗಳಲ್ಲಿ ಅರೆಗಂಬಗಳ ನಡುವೆ ಇರುವ ಬೃಹದ್ಗಾತ್ರದ ವೈಷ್ಣವ, ಶೈವ ಕಥೆಗಳನ್ನು ಬಿಂಬಿಸುವ ನರಸಿಂಹ, ತ್ರಿವಿಕ್ರಮ, ವರಾಹ, ಅಂಧಕಾಸುರ ಮರ್ದನ, ಗಜಾರಿ, ಗಿರಿಜಾಕಲ್ಯಾಣ ಮೊದಲಾದವೂ ಕೈಲಾಸ ದೇವಾಲಯದಲ್ಲಿ ಭವ್ಯವಾದ ಶಿಲ್ಪವೂ ದ್ರಾವಿಡ ಶಿಲ್ಪದ ಛಾಯೆಯನ್ನು ಸ್ಪಷ್ಟವಾಗಿ ಹೊಂದಿವೆ. ಆದರೆ ಈ ಕಾಲದ ಮೂರ್ತಿಶಿಲ್ಪದ ಪರಾಕಾಷ್ಠೆ ಎಂದರೆ ಎಲಿಫೆಂಟಾದ ದೊಡ್ಡ ಗುಹೆಯ ಅತ್ಯುಚ್ಚ ಮಟ್ಟದ ಬೃಹತ್ ಶಿಲ್ಪಗಳು. ಅದರಲ್ಲಿಯೂ ಗುಹೆಯ ಹಿಂದಿನ ಗೋಡೆಯ ಮೇಲೆ ಕಂಡರಿಸಿರುವ 21 ಅಡಿ ಅಗಲ 18 ಅಡಿ ಎತ್ತರ ಇರುವ ಎದೆಯಿಂದ ಮೇಲಕ್ಕೆ ಮಾತ್ರ ಬಿಡಿಸಿರುವ ಮಹೇಶಮೂರ್ತಿ. ನಡುವೆ ಧೀರಗಂಭೀರ ಮುಖಮುದ್ರೆ ಯುಳ್ಳ ತತ್ಪುರುಷ, ಬಲಗಡೆ ರುದ್ರಭಯಂಕರನಾದ ಅಘೋರಮೂರ್ತಿ ಮತ್ತು ಎಡಗಡೆ ಸುಕುಮಾರನಾಗಿ ಕಾಣುವ ವಾಮದೇವ - ಹೀಗೆ ವಿವಿಧ ರಸಭಾವಗಳ ಶಿವರೂಪಗಳನ್ನು ಒಂದೇ ಕಲ್ಲಿನಲ್ಲಿ ಕಡೆದಿರುವ ಜಾಣ್ಮೆಯಿಂದ ಅದರಲ್ಲಿಯ ಪ್ರಮಾಣಬದ್ಧತೆಯಿಂದ, ಅಲಂಕರಣದ ಸೊಬಗಿನಿಂದ ಈ ಶಿಲ್ಪ ಲೋಕಪ್ರಸಿದ್ಧವಾಗಿದೆ.

	ಇದೇ ಕಾಲಗಳಲ್ಲಿ ಕರ್ನಾಟಕದ ದಕ್ಷಿಣ ಭಾಗದಲ್ಲಿ ಗಂಗವಾಡಿಯಲ್ಲಿ ಬೆಳೆದ ಶಿಲ್ಪಶೈಲಿಯಲ್ಲಿ ಎರಡು ವಿಶಿಷ್ಟ ರೀತಿಗಳನ್ನು ಗುರುತಿಸಬಹುದು. ಪೂರ್ತಿಯಾಗಿ ಸ್ಥಳೀಯವಾಗಿಯೇ ಬೆಳೆದು ಬಂದ ಶೈಲಿಯೊಂದಾದರೆ, ಮತ್ತೊಂದು ಪಲ್ಲವ ಶೈಲಿಯ ಮತ್ತು ಚಾಳುಕ್ಯ ಶೈಲಿಯ ಪ್ರಭಾವದಿಂದ ರೂಪಗೊಂಡ ಶೈಲಿ. ಸ್ಥಳೀಯವಾದ ಶೈಲಿಯಲ್ಲಿ ಸಮತಟ್ಟಾದ ಕಲ್ಲಿನ ಮೇಲೆ ತೆಳುವಾಗಿ ಇಳಿಕೊರೆತದಲ್ಲಾಗಲಿ, ತೆಳುವುಬ್ಬಿನಲ್ಲಾಗಲಿ ಬಿಡಿಸಿದ ಶಿಲ್ಪ ಹೆಚ್ಚು. ಇವುಗಳಲ್ಲಿ ಕೆಲಮಟ್ಟಿನ ರೂಕ್ಷತೆಯನ್ನು ಕಂಡರೂ ಅವು ನೈಜವಾಗಿರುತ್ತವೆ. ಗರ್ಜಿಯ ಈಶ್ವರ ದೇವಾಲಯದ ಕಂಬಗಳ ಬುಡದಲ್ಲಿರುವ ತೀರ ತೆಳುವಾದ ಶಿಲ್ಪಗಳಾಗಲಿ, ವರುಣದ ಮಹಾಲಿಂ ಗೇಶ್ವರ ದೇವಾಲಯದ ಹೊರಗೋಡೆಯ ಮೇಲಿರುವ ರಾಮಾಯಣದ ಶಿಲ್ಪವಾಗಲಿ ತೀರ ಸರಳವಾದ ರೂಕ್ಷವಾದ ಶಿಲ್ಪಗಳೇ ಆದರೂ ಅವುಗಳಲ್ಲಿ ಕ್ರಿಯೆಯಿದೆ. ಸಾಮಾನ್ಯವಾಗಿ ಇವರ ಕಾಲದ ವೀರಗಲ್ಲುಗಳು ಈ ಗುಂಪಿಗೆ ಸೇರಿದವು. ಇವುಗಳಲ್ಲಿ ಬಿಡಿಸಿರುವ ತೆಳುಶಿಲ್ಪಗಳಲ್ಲಿ ಕಂಡುಬರುವುದು ಕ್ಷೇತ್ರ ಪರಿಮಾಣ ಮಾತ್ರ. ಆಳಕ್ಕೆ ಘನಪರಿಮಾಣಕ್ಕೆ ಇಲ್ಲಿ ಅವಕಾಶವಿಲ್ಲ. ಹಿರೇಗುಂಡುಗಲ್ಲಿನ ವೀರಗಲ್ಲುಗಳಲ್ಲಿ ಕೆಚ್ಚಿನಿಂದ ಒಬ್ಬರನ್ನೊಬ್ಬರು ಎದುರಿಸುತ್ತಿರುವ ವೀರರನ್ನು ತೋರಿಸಿದ್ದರೆ, ಬೇಗೂರಿನ ವೀರಗಲ್ಲಿನಲ್ಲಿ ಒಂದು ವಿಸ್ತಾರವಾದ ಯುದ್ಧ ಸನ್ನಿವೇಶದ ಚಿತ್ರಣವನ್ನೇ ಕಣ್ಣುಮುಂದೆ ನಿಲ್ಲಿಸಿದೆ. ನರಸಮಂಗಲದ ಈಶ್ವರ ದೇವಾಲಯದ ಗೋಪುರದ ಮೇಲಿನ ಗಚ್ಚಿನ ಮೂರ್ತಿಗಳಾಗಲಿ ನಂದಿ, ಬೇಗೂರು ಮೊದಲಾದ ಕಡೆ ದೇವಾಲಯಗಳಲ್ಲಿರುವ ಮೂರ್ತಿಗಳಾಗಲಿ ಪಲ್ಲವ ಶೈಲಿಯಲ್ಲಿರುವ ಅತ್ಯಂತ ಆಕರ್ಷಕ ಶಿಲ್ಪಗಳು. ವಿಶಾಲ ವಕ್ಷಸ್ಥಳ, ತೆಳುನಡು, ನೀಳ ಕೈಕಾಲುಗಳು, ಕೆಲವೇ ಆಭರಣಗಳು, ಸ್ಮಿತಗಂಭೀರ ಮುಖಮುದ್ರೆಗಳಿಂದ ಇಲ್ಲಿರುವ ಗಚ್ಚಿನ ಮೂರ್ತಿಗಳು, ಶಿಲಾಮೂರ್ತಿ ಗಳು ಸತ್ವಯುಕ್ತವಾಗಿವೆ. ದೇವತಾ ಮೂರ್ತಿಗಳನ್ನು, ತೀರ್ಥಂಕರರ ಮೂರ್ತಿಗಳನ್ನು ಕಂಡರಿಸುವಲ್ಲಿ ರೂವಾರಿಗಳಿಗೆ ಹೆಚ್ಚು ಸ್ವಾತಂತ್ರ್ಯವಿರುವು ದಿಲ್ಲ. ಆಗಮಶಾಸ್ತ್ರಗಳಲ್ಲಿ, ಶಿಲ್ಪಶಾಸ್ತ್ರಗಳಲ್ಲಿ ಅವುಗಳ ಮೂರ್ತಿಲಕ್ಷಣಗ ಳನ್ನು ನಿರ್ಧರಿಸಲಾಗಿರುತ್ತದೆ. ಆದ್ದರಿಂದಲೇ ಬೇರೆ ರೀತಿಯ ಶಿಲ್ಪಗಳಲ್ಲಿ ರೂವಾರಿಯ ಸಾಮಥ್ರ್ಯಕ್ಕನುಗುಣವಾಗಿ ಬೆಳೆವಣಿಗೆ, ವೈವಿಧ್ಯ ಕಂಡರೂ ಈ ಮೂರ್ತಿಗಳಲ್ಲಿ ಒಂದೇ ಬಗೆಯನ್ನು ಕಾಣುತ್ತೇವೆ. ತೀರ್ಥಂಕರರ ಮೂರ್ತಿಗಳಲ್ಲಿ ಅತಿನಿಷ್ಠೆಯ ನೇರ ನಿಶ್ಚಲ ನಿಲವು; ನೇರವಾಗಿ ಇಳಿಬಿದ್ದ ಕೈಗಳು, ಬಿಗಿಯಾದ ನೇರ ಕಾಲುಗಳು, ಮುಂಚಾಚಿದ ಹೊರವಾದ ಎದೆ, ವಿಶಾಲ ಭುಜಗಳು, ಶಾಂತ ಮುಖಮುದ್ರೆ ಇದ್ದು ಯಾವ ತೀರ್ಥಂಕರನ  ಮೂರ್ತಿಯಾದರೂ ಒಂದಕ್ಕೊಂದಕ್ಕೆ ವ್ಯತ್ಯಾಸ ಕಾಣಿಸದು. ಚಾಳುಕ್ಯ, ರಾಷ್ಟ್ರಕೂಟರ ಕಾಲದ್ದಾಗಲಿ, ಗಂಗರ ಕಾಲದ್ದಾಗಲಿ ಅಥವಾ ಮುಂದೆ ಬಂದ ಕಲ್ಯಾಣದ ಚಾಳುಕ್ಯ, ಹೊಯ್ಸಳರ ಕಾಲದ್ದಾಗಲಿ ಈ ಮೂರ್ತಿಗಳ ಮುಖಭಾವದಲ್ಲಿ, ಮಾಟದಲ್ಲಿ ಅದೇ ಬಗೆಯನ್ನು ಕಾಣುತ್ತೇವೆ. ವ್ಯತ್ಯಾಸವಿದ್ದರೆ ಪ್ರಮಾಣದಲ್ಲಿ, ಕಂಡರಣೆಗೆ ಉಪಯೋಗಿಸಿದ ಶಿಲೆಯಲ್ಲಿ. ಇಂಥದರಲ್ಲಿಯೂ ಶ್ರವಣಬೆಳಗೊಳದ ಗೊಮ್ಮಟೇಶ್ವರನ ಮೂರ್ತಿಯಲ್ಲಿ ಕಂಡುಬರುವ ಅಪೂರ್ವವಾದ ಭಾವನೆ, ಬೃಹತ್ತು ಮತ್ತು ಮಹತ್ತಿನ ಅನುಭವ ಜಗತ್ತಿನಲ್ಲಿಯೇ ಅದನ್ನೊಂದು ಅದ್ಭುತ ಶಿಲ್ಪವನ್ನಾಗಿಸಿದೆ. ಇದರೊಂದಿಗೆ ಚಾವುಂಡರಾಯ ಬಸದಿಯ ಕೈಪಿಡಿಯ ಮೇಲೆ ಕಂಡರಿಸಿರುವ ಮೂರ್ತಿಗಳನ್ನೂ ಗಮನಿಸಬೇಕು. ಕೈಯಲ್ಲೊಂದು ಹೂವನ್ನು ಹಿಡಿದು ಅಪರೂಪ ಭಂಗಿಯಲ್ಲಿ ಕುಳಿತ ಸ್ತ್ರೀಮೂರ್ತಿಯೊಂದರ ಅಂಗಾಂಗಗಳ ರಚನೆ ಪ್ರಮಾಣ ಬದ್ಧವಿಲ್ಲದಿರಬಹುದು. ಆದರೆ ಅತ್ಯಂತ ಮಧುರವಾದ ಮನೋ ಭಾವವನ್ನು ಹೊಮ್ಮಿಸಿರುವ ಈ ಶಿಲ್ಪದ ರೀತಿ ಅನುಪಮವಾದುದು.

	ಚೋಳರ ಕಾಲದ ಇಲ್ಲಿಯ ಶಿಲ್ಪಗಳು ಪಲ್ಲವ ಶೈಲಿಯ ಮುಂದಿನ ಬೆಳೆವಣಿಗೆಗಳೇ ಆದರೂ ಚೋಳರ ಮುಖ್ಯ ಭಾಗದಲ್ಲಿ ಬೆಳೆದು ಬಂದ ಅದ್ಭುತ ಬೆಳೆವಣಿಗೆ ಇಲ್ಲಿ ಅಷ್ಟಾಗಿ ಕಾಣಿಸದು. ಆದರೆ ಕೆಲವು ಲೋಹಶಿಲ್ಪಗಳ ಮಾದರಿಗಳು ಮೆಚ್ಚುವಂಥವು. ನಟರಾಜ, ಸೋಮಸ್ಕಂದ, ಶಿವಪಾರ್ವತಿಯರು ಮೊದಲಾದ ಇಂಥ ಲೋಹಮೂರ್ತಿ ಗಳಲ್ಲಿ ಅತ್ಯಂತ ಸುಂದರವಾದುದು ನರಸಾಪುರದಲ್ಲಿರುವ ನಾಲ್ಕಡಿಗೂ ಹೆಚ್ಚು ಎತ್ತರದ ಭವ್ಯವಾದ ನಟರಾಜ.

	ಹನ್ನೊಂದನೆಯ ಶತಮಾನದಿಂದೀಚೆಗೆ ಕಲ್ಯಾಣದ ಚಾಳುಕ್ಯರ ಕಾಲದಲ್ಲಿ ದೇವಾಲಯಗಳಲ್ಲಿ ಮೂರ್ತಿಶಿಲ್ಪ ಸಂಖ್ಯೆಯ ದೃಷ್ಟಿಯಿಂದ ಹೆಚ್ಚಾಯಿತು. ಇವರು ಮೃದುವಾದ ಬಳಪದ ಕಲ್ಲನ್ನು ಉಪಯೋಗಿಸಿದ್ದು ಶಿಲ್ಪದಲ್ಲಿ ಒಂದು ವಿಲಕ್ಷಣ ಶೈಲಿ ಆರಂಭವಾಗಲು ಕಾರಣವಾಯಿತು. ಕಂಡರಣೆಯಲ್ಲಿ ಸರಳತೆಯನ್ನು ಬದಿಗೊತ್ತಿ ಹೆಚ್ಚಿನ ಅಲಂಕರಣದ ಕಡೆ ಗಮನ ಹರಿಯಿತು. ದೇವಾಲಯದ ಹೊರಗೋಡೆಗಳ ಮೇಲೆ ಅರೆಗಂಬಗಳ ನಡುವೆ ಒಂದೊಂದು ಅರೆಯುಬ್ಬಿನ ಅಥವಾ ಅತಿಯುಬ್ಬಿನ ಶಿಲ್ಪಗಳನ್ನು ಬೇರೆ ಬೇರೆ ಭಂಗಿಗಳಲ್ಲಿ ನಿಲ್ಲಿಸಿರುವುದು ಹೆಚ್ಚು. ಹಲವು ಸ್ತ್ರೀಮೂರ್ತಿಗಳ ಅಪರೂಪ ನಾಟ್ಯಭಂಗಿಗಳು ಗಮನಾರ್ಹವಾದುವು. ಗುಂಡುಗುಂಡಾದ ಈ ಮೂರ್ತಿಗಳಲ್ಲಿ ಲವಲವಿಕೆ ಇದೆ. ಅಲಂಕಾರಗಳು ತಕ್ಕಷ್ಟು ತುಂಬಿವೆ. ಕಲ್ಯಾಣದ ಸುತ್ತಮುತ್ತ ಹರಡಿರುವ ಮೂರ್ತಿಗಳು ಜಲಸಂಗ್ವಿ, ಹರಸೂರು, ಮೇದಕ್, ಕುರುವತ್ತಿ, ಡಂಬಳ ಮೊದಲಾದ ಕಡೆಗಳಲ್ಲೆಲ್ಲ ಇರುವ ಈ ಮೂರ್ತಿಗಳು ಮನೋಹರವಾಗಿವೆ. ಆದರೂ ಈ ಹೊತ್ತಿಗೆ ಶಿಲ್ಪಶಾಸ್ತ್ರಗಳ ಹಿಡಿತ ಬಲವಾಗಿತ್ತು; ಇವು ಶಿಲ್ಪಿಗಳಿಗೆ ದಿಕ್ಸೂಚಿಯಾಗಿದ್ದುವು. ಅಷ್ಟೇ ಅಲ್ಲ, ಅದನ್ನು ಮೀರದಂತೆ ಅವನಿಗೆ ತಡೆಯೂ ಆಗಿದ್ದುವು. ಆದ್ದರಿಂದ ಶಿಲ್ಪಿ ತನ್ನ ಸಾಮಥ್ರ್ಯದ ಅರಕೆಯನ್ನು ತುಂಬಿಕೊಳ್ಳಲು ಮೂರ್ತಿಗಳನ್ನು, ಕಟ್ಟಡಗಳನ್ನು ಶೃಂಗರಿಸುವಲ್ಲಿ ತೊಡಗಿದ್ದಾನೆ. ಕಲ್ಯಾಣ ಚಾಳುಕ್ಯರ ದೇವಾಲಯಗಳ ಬಾಗಿಲುವಾಡಗಳ ಅತಿ ವಿಸ್ತøತ ಅಲಂಕರಣಗಳಲ್ಲಿ ಇದನ್ನು ಕಾಣಬಹುದು. ಈ ಮುಂಚೆ ಸರಳವಾದ ಕೆಲವೇ ಅಲಂಕರಣಗಳನ್ನು ಹೊಂದಿದ ಬಾಗಿಲುವಾಡಗಳಲ್ಲಿ ಈಗ ಹತ್ತಾರು ಪಟ್ಟಿಕೆಗಳು, ಬಳ್ಳಿಸುರುಳಿ, ಎಲೆಯ ಸಾಲು, ಹೂಗಳ ಪಟ್ಟಿ, ನಾಟ್ಯಭಂಗಿಗಳ ಸಾಲು, ಸಿಂಹ ಸಾಲು ಇತ್ಯಾದಿಯಾಗಿ ಬಾಗಿಲನ್ನು ಸುತ್ತಿಕೊಂಡಿರುತ್ತವೆ. ಆದರೂ ಹೊರಗೋಡೆಗಳಾಗಲಿ, ಒಳ ಅಂಕಣಗಳಾಗಲಿ ಕೆಲವೇ ಮೂರ್ತಿಗಳಿಂದ ಇತರ ಅಲಂಕರಣಗಳಿಂದ ಕೂಡಿದ್ದು ಇವುಗಳಲ್ಲಿ ವಾಸ್ತು ಮತ್ತು ಶಿಲ್ಪಗಳೆರಡೂ ಹಿತಮಿತವಾಗಿ ಬೆರೆತಿರುವುದನ್ನು ಕಾಣಬಹುದು.

	ಕಲ್ಯಾಣ ಚಾಳುಕ್ಯರ ಕಾಲದ ದೇವಾಲಯಗಳಲ್ಲಿ ವಾಸ್ತುವಿನಷ್ಟೆ ಪ್ರಾಧಾನ್ಯ ಶಿಲ್ಪಕ್ಕೂ ದೊರೆತಿದ್ದರೆ ಹೊಯ್ಸಳರ ಕಾಲದಲ್ಲಿ ವಾಸ್ತುಶಿಲ್ಪವಾಗಿ ಮಾರ್ಪಟ್ಟಿದೆ. ಹೊಯ್ಸಳ ದೇವಾಲಯಗಳಲ್ಲಿ ಬೇರೆ ಬೇರೆ ವಿನ್ಯಾಸಗಳನ್ನು ಕಾಣಬಹುದಾಗಿದ್ದರೂ ಆ ಬದಲಾವಣೆಗಳೆಲ್ಲ ಶಿಲ್ಪವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಮಾಡಿದಂಥವು. ಹೊರಗೋಡೆಗಳನ್ನು ಹಲವು ಭಾಗಗಳನ್ನಾಗಿ ಮಾಡಿ, ಒಳತಳ್ಳಿ ಮುಂದಕ್ಕೆ ಚಾಚಿ ಕಚ್ಚುಕಚ್ಚುಗೊಳಿಸಿದ ಚೌಕವಿನ್ಯಾಸದಲ್ಲಾಗಲಿ, ನಕ್ಷತ್ರಾಕಾರದಲ್ಲಾಗಲಿ ರಚಿಸಿದ್ದರೆ ಅದಕ್ಕೆ ಕಾರಣ ಗೋಡೆಯ ವಿಸ್ತಾರವನ್ನು ಹೆಚ್ಚು ಮಾಡಿ ಅವುಗಳನ್ನು ಹೆಚ್ಚು ಶಿಲ್ಪಗಳಿಂದ ತುಂಬಬಹುದೆಂಬುದೇ. ಇದರೊಂದಿಗೆ ಆ ಶಿಲ್ಪಗಳ ಮೇಲೆ ನೆಳಲು-ಬೆಳಕಿನ ಪ್ರಭಾವ ಉಂಟಾಗುವುದೂ ಶಿಲ್ಪ ಸಾಲು ತೀರ ಒತ್ತಾಗಿ ಬಂದಿದೆ ಎಂಬ ಭಾವನೆ ಬರದಂತೆ, ನೋಡುವವರ ದೃಷ್ಟಿ ಒಂದೊಂದೇ ಶಿಲ್ಪದ ಮೇಲೆ ಬೀಳುವಂತೆ ಮಾಡುವುದೂ ಇಂಥ ವಿನ್ಯಾಸಗಳ ಉದ್ದೇಶವಿರಬಹುದು. ಹೇಗೂ ಈ ದೇವಾಲಯಗಳಲ್ಲಿ ಗೋಡೆಗಳ ಬುಡದಿಂದ ಹಿಡಿದು ಶಿಖರದ ತುದಿಯವರೆಗೂ ಸಾಲುಸಾಲು ಶಿಲ್ಪಗಳು ತುಂಬಿದ್ದು ಅವುಗಳಲ್ಲಿ ಆನೆಸಾಲು, ಕುದುರೆಸಾಲು, ಸಾಲುಹಂಸಗಳು, ಬಳ್ಳಿಸುರುಳಿ, ರಾಮಾಯಣ, ಭಾರತ, ಭಾಗವತಾದಿ ಕಥನ ಶಿಲ್ಪ ಸಾಲು, ದೇವಾನುದೇವತೆಗಳ, ಚಾಮರಧಾರಿಣಿಯರ, ಇತರ ಸ್ತ್ರೀಪುರುಷ ಮೂರ್ತಿಗಳ ಹಲವು ಭಂಗಿಗಳ ಸಾಲು, ಬಳ್ಳಿ ವಿತಾನಗಳು, ಕೀರ್ತಿಮುಖಗಳು, ಅರೆಗೋಪುರಗಳು ಮುಂತಾದವನ್ನು ಕಾಣಬಹುದು. ಹೀಗೆ ಗಿಡದಂತೆ ತುಂಬಿರುವ ಶಿಲ್ಪಸಾಲುಗಳಿಂದ ಹೊಯ್ಸಳ ದೇವಾಲಯಗಳು ಶಿಲ್ಪದ ಪ್ರದರ್ಶನಶಾಲೆಯಾಗಿ ಮಾರ್ಪಟ್ಟಿವೆ. ಹೊರಭಾಗದಲ್ಲಿ ಮಾತ್ರವಲ್ಲ ಎಷ್ಟೋ ವೇಳೆ ಬಾಗಿಲುವಾಡಗಳ ಸುತ್ತಲೂ ಒಳಗಿನ ತೊಲೆಗಳ ಮೇಲೆ ಭುವನೇಶ್ವರಿ ಶಿಲ್ಪಗಳು ತುಂಬಿರುವುವಲ್ಲದೆ ಕಂಬಗಳ ಮೇಲ್ಭಾಗದಲ್ಲಿ ಮದನಿಕೆಗಳು ಹಲವು ಭಂಗಿಯಲ್ಲಿ ನಿಂತಿರುವುದುಂಟು. ಇವು ಕಟ್ಟಡಗಳ ಭದ್ರತೆ,ಭವ್ಯತೆ, ಗಾಂಭೀರ್ಯಗಳ ಕಡೆ ದೃಷ್ಟಿಹರಿಯದಂತೆ ಮಾಡುತ್ತವೆ.

	ಹೆಚ್ಚಿನ ಆಸ್ಥೆಯಿಂದ ಪ್ರತಿಯೊಂದು ವಿವರವನ್ನೂ ಗಮನವಿಟ್ಟು ಬಿಡಿಸಿರುವ ಹೊಯ್ಸಳ ಶಿಲ್ಪದಲ್ಲಿ ಮೂರ್ತಿಗಳ ಅಂತಃಸ್ಫುರಣೆಗಿಂತ ಹೊರಗಿನ ಅಲಂಕರಣಗಳು ಬಹುಪಾಲು ಎದ್ದುಕಾಣುತ್ತವೆ. ಮೂರ್ತಿಶಿಲ್ಪ ಗಳಲ್ಲಿ ಅವು ಗಂಡಾಗಲಿ, ಹೆಣ್ಣಾಗಲಿ ಅವುಗಳ ಮುಖಭಾವ, ನಿಲುವು, ನೋಟಗಳಲ್ಲಿ ಒಂದು ರೀತಿಯ ಏಕತಾನ ಕಂಡುಬರುತ್ತದೆ. ಅವುಗಳ ಮಾಟದಲ್ಲಿ ಪ್ರಸನ್ನತೆ, ಗಾಂಭೀರ್ಯಗಳನ್ನು ಗುರುತಿಸಬಹುದಾದರೂ ಚಾಳುಕ್ಯ ಶಿಲ್ಪಗಳಲ್ಲಿ ಕಂಡುಬರುವ ಸ್ವಾಭಾವಿಕತೆ, ಚಲನೆ, ಜೀವಂತಿಕೆ ಅಷ್ಟಾಗಿ ಕಾಣಿಸದು. ಬಹುಶಃ ಹೊಯ್ಸಳ ರೂವಾರಿಗಳು ಮೂರ್ತಿಗಳ ಪ್ರಮಾಣವನ್ನು ಕುಗ್ಗಿಸಿ ಗುಂಡುಮುಖ, ತುಂಬುಕೆನ್ನೆ, ಗುಂಡು ಕೈಕಾಲುಗಳಿಂದ ಕೂಡಿದ ಒಂದು ಆದರ್ಶ ಆಕಾರವನ್ನು ಕೊಡಲು ಯತ್ನಿಸಿದುದು ಅವುಗಳ ಸ್ಥೂಲತೆ ಮತ್ತು ಸ್ತಬ್ಧತೆಗಳು ಎದ್ದುಕಾಣುವಂತೆ ಮಾಡಿದೆ. ಹಲವು ನಾಟ್ಯಭಂಗಿಗಳನ್ನು ಶಿಲ್ಪಿಗಳು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಿ, ಗ್ರಹಿಸಿ ಅವಕ್ಕೆ ರೂಪು ಕೊಡುವಲ್ಲಿ ಯಶಸ್ವಿಯಾಗಿದ್ದರೂ ಶಿಲ್ಪಕ್ಕಾಗಿಯೇ ನಿಂತ ಒಂದು ಸ್ತಬ್ಧಭಂಗಿಯನ್ನು ಸೂಚಿಸುತ್ತವೆಯೇ ಹೊರತು ಅವುಗಳಲ್ಲಿ ಚಲನೆಯನ್ನೆಣಿಸುವಂತಿಲ್ಲ. ಇದರ ಜೊತೆಗೆ ಅವುಗಳ ಮೇಲಿನ ನಿಲುವಾಭರಣಗಳು, ಅತಿಸೂಕ್ಷ್ಮ ಕಂಡರಣೆಗಳು ಅವುಗಳ ಚಾಲನೆಗೆ ಅಡ್ಡಿಯಾಗಿವೆ. ಆದರೂ ಕಂಡರಣೆಯ ಸೂಕ್ಷ್ಮ ವಿವರಗಳು ಯಾರನ್ನೂ ಹರಗುಗೊಳಿಸುತ್ತವೆ. ಮದನಿಕೆಯ ಕೈಬಳೆ ಆಡುವಂತೆ ಬಿಡಿಸಿರುವುದು, ಮಣಿಹಾರ ಬೇರೆಯಾಗಿ ನೇತಾಡುವುದು, ಮಕರ ತೋರಣದ ಮಕರಗಳ ಹಿಂದಿನ ಬಾಲದ ಸುರುಳಿಗಳನ್ನು ಪದರಪದರವಾಗಿ ಬಿಡಿಸಿರುವುದು, ಲತಾವಿತಾನಗಳ ಬಳ್ಳಿ ಎಳೆಗಳನ್ನೂ ಎಲೆಗಳನ್ನೂ ಬಿಡಿಬಿಡಿಯಾಗಿ ತೋರಿಸಿರುವುದು, ಹಣ್ಣೊಂದರ ಮೇಲೆ ಕುಳಿತ ನೊಣವನ್ನು ಹಿಡಿಯಲು ದೇಹ ಕೊಂಕಿಸಿ ಬಾಲ ಮುದುರಿ ಚಿಮ್ಮಲು ಸಿದ್ಧವಿರುವ ಹಲ್ಲಿ-ಇಂಥ ವಿವರಗಳು ಸಾವಿರಾರು. ಬೇಲೂರಿನ ಮದನಿಕೆಗಳು, ಹಳೇಬೀಡಿನ ಗೋಡೆಯ ಮೇಲಿನ ಮೂರ್ತಿಶಿಲ್ಪಗಳು ಸುಂದರವೆನಿಸಬಹುದಾದರೂ ಸೂಕ್ಷ್ಮಾಲಂಕಾರ ವಿವರಗಳಿಂದಲೇ ಹೊಯ್ಸಳ ಶಿಲ್ಪಗಳಿಗೆ ಸೊಗಸು, ಶ್ರೀಮಂತಿಕೆ ಪ್ರಾಪ್ತವಾಗಿದೆ.

	ಹೊಯ್ಸಳರ ಕಾಲದಲ್ಲಿ ಶಿಲ್ಪಿಗಳ ಗಮನ ಹೆಚ್ಚಾಗಿ ಕಥನಶಿಲ್ಪದ ಕಡೆ ಹರಿಯಿತು. ಬೃಹನ್ಮೂರ್ತಿಗಳಿಗಿಂತ ಕಿರುಪ್ರಮಾಣದಲ್ಲಿ ಓಡುವ ದೃಶ್ಯಾವಳಿಗಳನ್ನು ಬಿಡಿಸಿಕೊಂಡು ಹೋಗುವಲ್ಲಿ ಚಾಳುಕ್ಯ ಶಿಲ್ಪಿಗಳಿಗಿಂತ ಇವರು ಮುಂದುವರಿದಿದ್ದಾರೆ. ಆನೆ ಸಾಲು, ಕುದುರೆ ಸಾಲು, ಹಂಸ ಮೊದಲಾದವುಗಳ ಸಾಲಿನಲ್ಲಿ ಒಂದೊಂದೇ ಪ್ರಾಣಿ ಪಕ್ಷಿಗಳನ್ನು ಪ್ರತ್ಯೇಕ ವಾಗಿ ನೋಡುವುದಕ್ಕಿಂತ ಒಟ್ಟು ಸಾಲಿನಲ್ಲಿ ಅವುಗಳ ನಡಿಗೆ, ನೋಟ, ಗುಣ, ಸ್ವಭಾವಗಳನ್ನು ಸ್ಥೂಲವಾಗಿ ಗಮನಿಸಬೇಕು. ರಾಮಾಯಣ, ಭಾರತ, ಭಾಗವತಗಳಂತೂ ಈ ಶಿಲ್ಪಿಗಳ ಪ್ರಿಯವಾದ ವಸ್ತುಗಳು. ಇವಲ್ಲದೆ ಸಮುದ್ರಮಥನ, ಪ್ರಹ್ಲಾದನ ಕಥೆ, ಶಿವ ಲೀಲೆಗಳು ಇವುಗಳೊಂದಿಗೆ ಸಾಮಾಜಿಕ ದೃಶ್ಯಾವಳಿಗಳು ಅಲ್ಲಲ್ಲಿ ತಲೆಹಾಕಿರುವು ದುಂಟು. ಒಂದೊಂದು ಸಲ ಒಂದೇ ಶಿಲ್ಪದಲ್ಲಿ ಒಂದು ದೃಶ್ಯದ ಪೂರ್ಣ ಚಲನೆಯನ್ನು ತೋರಿಸುವ ಸಾಹಸ ಮಾಡಿದ್ದಾರೆ. ಭೀಮನು ಭಗದತ್ತನ ಆನೆಯನ್ನೆದುರಿಸಿದಾಗ ಅದು ಅವನನ್ನು ಸೊಂಡಿಲಿನಿಂದೆತ್ತಿ ಎಸೆಯುವುದೂ ಅವನು ಆಕಾಶದಲ್ಲಿ ಚಿಮ್ಮಿ ಹೋಗಿರುವುದು ಎರಡನ್ನೂ ಬೇಲೂರಿನ ಶಿಲ್ಪವೊಂದರಲ್ಲಿ ನೋಡಬಹುದು.

	ಚಾಳುಕ್ಯರಂತೆ ಹೊಯ್ಸಳರೂ ಮೃದುವಾದ ಬಳಪದ ಕಲ್ಲನ್ನು ಶಿಲ್ಪಕ್ಕೆ ಉಪಯೋಗಿಸಿದುದು ಬೃಹನ್ಮೂರ್ತಿಗಳನ್ನು ಕಂಡರಿಸಲು ಅವರಿಗೆ ಸಾಧ್ಯವಾಗದಿದ್ದರೂ ಶಿಲ್ಪಬಾಹುಳ್ಯಕ್ಕೂ ಕುಸುರಿಕೆಲಸದ ಸೂಕ್ಷ್ಮಾಲಂಕರಣ ಗಳಿಗೂ ಕಾರಣವಾಯಿತು. ಆದರೆ ಬಾದಾಮಿ ಚಳುಕ್ಯರ, ರಾಷ್ಟ್ರಕೂಟರ ಕಾಲದ ಶಿಲ್ಪಗಳಲ್ಲಿರುವ ಕೆಚ್ಚು, ಕಸುವು, ಲವಲವಿಕೆ ಇವುಗಳಲ್ಲಿ ಅಷ್ಟಾಗಿ ಕಂಡುಬರುವುದಿಲ್ಲ.

	ವಿಜಯನಗರ ಅರಸರ ಕಾಲದಲ್ಲಿ ಶಿಲ್ಪ ಹೊಸ ಜಾಡು ತುಳಿಯಿತು. ದ್ರಾವಿಡ ಶೈಲಿಯನ್ನು ಅನುಸರಿಸಿ ಗಟ್ಟಿಕಲ್ಲಿನ ದೇವಾಲಯಗಳನ್ನು ಈ ಕಾಲದಲ್ಲಿ ನಿರ್ಮಿಸಿದರೂ ಚಾಳುಕ್ಯ, ಹೊಯ್ಸಳ ದೇವಾಲಯಗಳಂತೆ ಮೂರ್ತಿಶಿಲ್ಪಗಳಿಂದ ಅಲಂಕರಿಸಿದರು. ಈ ಮೂರ್ತಿಗಳಲ್ಲಿ ಹೆಚ್ಚು ನಯನಾಜೂಕುಗಳಿಲ್ಲದಿದ್ದರೂ ಕೆಚ್ಚುಕಸುವುಗಳೂ ಲವಲವಿಕೆಯೂ ಕಂಡುಬರುತ್ತದೆ. ಸಾಲುಗಂಬಗಳಲ್ಲಿ ಬಿಡಿಸಿರುವ ಪ್ರಾಣಿಪಕ್ಷಿಗಳು, ಬಳ್ಳಿ ಸುರುಳಿಗಳು, ದೇವಾನುದೇವತೆಗಳ ತೆಳು-ಉಬ್ಬು ಮೂರ್ತಿಗಳು, ಕಂಬಗಳಿಗೆ ಹೊಂದಿಕೊಂಡಂತೆ ಹಿಂಗಾಲುಗಳ ಮೇಲೆ ಚಿಮ್ಮಿನಿಂತಿರುವ ಯಾಳಿ, ಕುದುರೆಗಳ ಸಾಲು, ಕಂಬಗಳ ಘನಾಕೃತಿಮುಖಗಳ ಮೇಲೆ ಉಬ್ಬಿಸಿ ಬಿಡಿಸಿರುವ ದಶಾವತಾರ ಮೂರ್ತಿಗಳು, ನೃತ್ಯಭಂಗಿಗಳು, ನೇರವಾದ ಸರಳವಾದ ಗೋಡೆಗಳ ಮೇಲೆ ರಾಮಾಯಣ, ಭಾಗವತಾದಿ ಗಳ ಕಥನ ಶಿಲ್ಪಸಾಲುಗಳು ಮುಂತಾದುವುಗಳಿಂದ ಇವರ ದೇವಾಲಯಗಳು ಶ್ರೀಮಂತವಾಗಿದ್ದರೂ ಈ ಶಿಲ್ಪಗಳು ವಾಸ್ತುವಿನ ಭವ್ಯತೆಯನ್ನು ಮರೆಮಾಡಿಲ್ಲ. ಮಾನವಮಿ ದಿಬ್ಬದ ಮುಖಗಳ ಮೇಲೆ ಉಬ್ಬುಶಿಲ್ಪದಲ್ಲಿ ಕಂಡರಿಸಿರುವ ಬಗೆಬಗೆಯ ನೃತ್ಯಭಂಗಿಗಳು, ಬೇಟೆಯ ದೃಶ್ಯಗಳು, ಆನೆ ಕುದುರೆಗಳ ಮೆರವಣಿಗೆಗಳು, ಹಲವು ಬಗೆಯ ಪ್ರಾಣಿಪಕ್ಷಿಗಳು ತುಂಬಿರುವ ಇದರಲ್ಲಿನ ಕೋಲಾಟ, ವಾದ್ಯಮೇಳ, ರಿಂಗಣಗುಣಿತಗಳಲ್ಲಿ ಚಲನೆಯಿದೆ, ಸತ್ವವಿದೆ. ಇದರೊಂದಿಗೆ ಶೃಂಗೇರಿಯ ವಿದ್ಯಾಶಂಕರ ದೇವಾಲಯದ ಹೊರಗೋಡೆಗಳ ಮೇಲಿನ ಸ್ವಾರಸ್ಯಕರವಾದ ಮೂರ್ತಿಶಿಲ್ಪಗಳ ಅಲಂಕರಣವನ್ನೂ ಗಮನಿಸಬೇಕು. ಈ ಎಲ್ಲ ಶಿಲ್ಪಗಳೂ ಕಿರುಪ್ರಮಾಣದವು; ಹೊರಗಿನ ಅಂಗಾಂಗಗಳ ರಚನೆಗೆ, ಪ್ರಮಾಣಬದ್ಧತೆಗೆ ಹೆಚ್ಚಿನ ಗಮನವಿಲ್ಲ; ಹೊಯ್ಸಳರ ಕುಸುರಿ ಕೆಲಸಕ್ಕೆ ಇಲ್ಲಿ ಅವಕಾಶವಿಲ್ಲ. ಆದರೆ ಇವುಗಳಲ್ಲಿ ಹೊಸತನವಿದೆ; ಇವು ಜೀವಂತ ಶಿಲ್ಪಗಳಾಗಿವೆ. ವಿಜಯನಗರ ಕಾಲದ ಶಿಲ್ಪಗಳ ಮತ್ತೊಂದು ವೈಶಿಷ್ಟ್ಯವೆಂದರೆ ಪೂರ್ಣರೂಪದ ಬೃಹತ್‍ಪ್ರಮಾಣದ ಕೆಲವು ಶಿಲ್ಪಗಳು. ಲಕ್ಷ್ಮೀ ನರಸಿಂಹ, ಸಾಸಿವೆಕಾಳು ಗಣಪತಿ, ಕಡಲೆಕಾಳುಗಣಪತಿ, ವೀರಭದ್ರ ಮೊದಲಾದ ಬೃಹದ್ಗಾತ್ರದ ಶಿಲ್ಪಗಳಲ್ಲಿ ಭವ್ಯತೆ ಇದೆ. ವಿಜಯನಗರ ಕಾಲದ ಹಲವು ಲೋಹಮೂರ್ತಿಗಳಿದ್ದು ಅವು ಉತ್ಸವಮೂರ್ತಿಗಳಾಗಿವೆ. ಅವುಗಳಲ್ಲಿ ಸಾಂಪ್ರದಾಯಿಕತೆ ಇದ್ದು ಒಂದು ರೀತಿಯ ನಿಶ್ಚಲತೆ ಎದ್ದು ಕಾಣುತ್ತದೆ.

	ಮೈಸೂರು ಒಡೆಯರ ಕಾಲದಲ್ಲಿ ಶಿಲ್ಪಕಲೆಗೆ ಹೆಚ್ಚಿನ ಪ್ರೋತ್ಸಾಹ ವೇನೊ ದೊರಕಿತು. ಸಣ್ಣ ಪ್ರಮಾಣದ್ದಾದರೂ ಪೂರ್ಣರೂಪದ ಮೂರ್ತಿಗಳನ್ನು ಕಲ್ಲಿನಲ್ಲಿ, ಗಚ್ಚಿನಲ್ಲಿ, ಲೋಹದಲ್ಲಿ ಹೇರಳವಾಗಿ ರಚಿಸಲಾಗಿದೆ. ಇವೆಲ್ಲ ಹೆಚ್ಚಾಗಿ ದೇವತೆಗಳ, ಭಕ್ತರುಗಳ ಮೂರ್ತಿಗಳೇ. ಬಗೆಬಗೆಯ ಪ್ರತಿಮಾಶಿಲ್ಪಗಳನ್ನು ಈ ಕಾಲದಲ್ಲಿ ಕಂಡರಿಸಿರುವುದರಿಂದ ಪ್ರತಿಮಾಲಕ್ಷಣಗಳ ಅಧ್ಯಯನಕ್ಕೆ ಇವು ಸಹಕಾರಿಯಾಗಿವೆ. ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ ಹಾಗೂ ಚಾಮರಾಜನಗರದ ಚಾಮರಾಜೇಶ್ವರ ದೇವಾಲಯದ ಕೈಪಿಡಿಗೋಡೆಗಳಲ್ಲಿ ಗಚ್ಚಿನಲ್ಲಿ ನಿರ್ಮಿಸಿರುವ ಬೇರೆ ಬೇರೆ ಗಣಪತಿಯ ಮೂರ್ತಿಗಳು, ಶಿವಲೀಲೆಗಳು, ಪ್ರಾಕಾರದಲ್ಲಿರುವ ಕಲ್ಲಿನ ಮತ್ತು ಲೋಹದ ಶಿವಲೀಲಾಮೂರ್ತಿಗಳು, ಪುರಾತನರು, ಮೈಸೂರು ಕೋಟೆಯಲ್ಲಿರುವ ಕೃಷ್ಣಸ್ವಾಮಿ ದೇವಾಲಯದಲ್ಲಿರುವ ಆಳ್ವಾರರ ಮೂರ್ತಿಗಳು, ಉತ್ಸವಮೂರ್ತಿಗಳು ಗಮನ ಸೆಳೆಯುತ್ತವೆ. ಆದರೆ ಈ ಮೂರ್ತಿಗಳನ್ನು ಕಲ್ಲಿನಲ್ಲಿ ಕಂಡರಿಸುವಲ್ಲಿ, ಗಾರೆಗಚ್ಚುಗಳಿಂದ ನಿರ್ಮಿಸುವಲ್ಲಿ, ಲೋಹದಿಂದ ಎರಕಹೊಯ್ಯುವಲ್ಲಿ ಆಗಮಗಳಲ್ಲಿ ಶಿಲ್ಪಶಾಸ್ತ್ರಗಳಲ್ಲಿ ನಿಶ್ಚಿತಗೊಳಿಸಲ್ಪ ಟ್ಟಿದ್ದ ಲಕ್ಷಣಗಳಿಗನುಸಾರವಾಗಿ ರಚಿಸಿರುವುದು ವ್ಯಕ್ತವಾಗುತ್ತದೆ. ಈ ಮೂರ್ತಿಗಳಲ್ಲಿ ಕಂಡುಬರುವ ವಿಶಾಲವಾದ ಕಣ್ಣುಗಳು, ಚೂಪುಮೂಗು, ತುಟಿ ಕೊಂಕಿಸಿ ಮೂಡಿಸಿರುವ ಕೃತಕ ನಗೆ, ತುಂಬುಗಲ್ಲ, ಕಿರುಗದ್ದ, ಗುಂಡುಮುಖ, ಗಿಡ್ಡ ಬೆರಳುಗಳು, ಸೆಟೆದುಕೊಂಡಂತಿರುವ ನಿಶ್ಚಲ ದೇಹರಚನೆ; ದೇವ ದೇವಿಯರನ್ನು ತೋರಿಸುವಲ್ಲಿ ಪ್ರಮಾಣದಲ್ಲಿ ಸ್ವಾಭಾವಿಕ ಗುಣಲಕ್ಷಣಗಳಿಗಿಂತ, ನಿರಾಳಭಾವನೆಯನ್ನು ಹೊಮ್ಮಿಸುವು ದಕ್ಕಿಂತ, ಕೃತಕತೆಯ ಹಾದಿಯನ್ನು ತುಳಿದಿರುವುದು ಕಂಡುಬರುತ್ತದೆ. ಈ ಶಿಲ್ಪಗಳಲ್ಲಿ ವಿಜಯನಗರ ಶಿಲ್ಪದ ಅನುಕರಣೆ ಇದ್ದರೂ ಅಲ್ಲಿಯ ಚಲನೆ, ನಿರಾಳತೆ ಇಲ್ಲಿ ಕಂಡುಬರುವುದಿಲ್ಲ. ಶಿಲ್ಪದ ಶೈಲಿಯಲ್ಲಿ ಅವನತಿಯ ಕುರುಹು ಇಲ್ಲಿ ಸ್ಪಷ್ಟವಾಗಿದೆ. ಈ ಕಾಲದಲ್ಲಿ ಕೇವಲ ದೇವತಾಮೂರ್ತಿ ಗಳನ್ನು ಅಥವಾ ಭಕ್ತವಿಗ್ರಹಗಳನ್ನು ಮಾತ್ರ ತಯಾರಿಸಲು ಗಮನ ಕೊಟ್ಟಿದ್ದು ವಿಜಯನಗರ ಕಾಲದಲ್ಲಿದ್ದಂತೆ ಕಥನಶೈಲಿಯ ಶಿಲ್ಪ, ಕೋಲಾಟ, ಸೈನ್ಯಬಲ, ಪ್ರಾಣಿಪಕ್ಷಿಗಳ ಸಾಲು ಮೊದಲಾದ ಐಹಿಕ ವಿಷಯಗಳಿಗೆ ಸಂಬಂಧಿಸಿದ ಶಿಲ್ಪಗಳ ಕಂಡರಣೆ ನಿಂತುಹೋದುದು, ಅದರಿಂದ ಶಿಲ್ಪಿಗಳಿಗೆ ಹೆಚ್ಚಿನ ಸ್ವಾತಂತ್ರ್ಯಕ್ಕೆ ಅವಕಾಶವಿಲ್ಲದುದು ಇದಕ್ಕೆ ಕಾರಣವಿರಬಹುದು. ಕೆಳದಿಯ ನಾಯಕರು, ಚಿತ್ರದುರ್ಗದ ಪಾಳೆಯಗಾರರು, ಇತರ ತುಂಡರಸರ ಕಾಲದ ಶಿಲ್ಪವೂ ಇದಕ್ಕೆ ಭಿನ್ನವಿಲ್ಲ. ಆದರೆ ಅಲ್ಲಿ ಕೆಲವು ವೇಳೆ ಜಂಬಿಟ್ಟಿಗೆಯಲ್ಲಿರುವಂತೆ, ನೀರ್ತಡಿಯ ರಂಗನಾಥನ ದೇವಾಲಯದ ಗೋಡೆಗಳ ಮೇಲಿರುವಂತೆ, ಗೋಡೆಗಳು, ಕಂಬಗಳು, ಶಿಲ್ಪಗಳಿಂದ ತುಂಬಿಹೋಗಿದ್ದು ಅವು ವಿಜಯನಗರ ಶೈಲಿಯ ಅನುಕರಣೆಯಾಗಿರುತ್ತವೆ. ಆದರೆ ಶಿಲ್ಪಗಳ ಕಂಡರಣೆಯಲ್ಲಿ ಅಲ್ಲಿಯ ಸತ್ವ ಇವುಗಳಲ್ಲಿಲ್ಲ. ಈ ಕಾಲಗಳಲ್ಲಿ ಕರ್ನಾಟಕದ ನಾನಾ ಭಾಗಗಳಲ್ಲಿ ನಿರ್ಮಿಸಲಾದ ತೇರುಗಳ ಲ್ಲಿಯ ಮರದ ಕೆತ್ತನೆಯ ಹಲವು ಮೂರ್ತಿಗಳು ಗಮನಾರ್ಹವಾದುವು. ದೇವಾನುದೇವತೆಗಳ ಮೂರ್ತಿಗಳು ಮತ್ತು ರಾಮಾಯಣ, ಭಾರತ, ಭಾಗವತಗಳ ಸನ್ನಿವೇಶಗಳ ಜೊತೆಗೆ ಇವುಗಳಲ್ಲಿ ಕಾಮಶಾಸ್ತ್ರ ನಿರೂಪಿಸುವ ಸಂಭೋಗನಿರತ ಮೈಥುನ ಶಿಲ್ಪಗಳನ್ನೂ ಜೋಡಿಸಿರುವುದು ಹೆಚ್ಚು.

	ಉತ್ತರ ಕರ್ನಾಟಕದ ಭಾಗಗಳಲ್ಲಿ ಬಹಮನೀ ಸುಲ್ತಾನರು, ಆದಿಲ್ ಶಾಹೀ ಅರಸರ ಆಡಳಿತದಲ್ಲಿ ಮೂರ್ತಿಶಿಲ್ಪ ಪೂರ್ತಿಯಾಗಿ ನಿಂತು ಹೋದರೂ ಮಸೀದಿ, ಗುಮ್ಮಟಗಳಲ್ಲಿ ಶಿಲೆಯ ಅಥವಾ ಗಾರೆಗಚ್ಚಿನ ಅಲಂಕರಣ ಶಿಲ್ಪಕ್ಕೆ ಪ್ರಾಶಸ್ತ್ಯ ದೊರೆಯಿತು. ಇಬ್ರಾಹೀಮ್ ರೋಜಾ ಮುಂತಾದ ಕೆಲವು ಕಟ್ಟಡಗಳು ತಮ್ಮ ನವುರಾದ ಅಲಂಕರಣ ಶಿಲ್ಪಕ್ಕೆ ಹೆಸರಾಗಿವೆ. ಬಳ್ಳಿಸುರುಳಿ, ಎಲೆ, ಹೂಗಳು, ಮೊಗ್ಗುಗಳ ಜೊತೆಗೆ ಅಲಂಕಾರ ಲಿಪಿಯನ್ನು ಸುಂದರವಾಗಿ ಬಿಡಿಸುವಲ್ಲಿ ಈ ಶಿಲ್ಪಿಗಳು ನಿಷ್ಣಾತರಾಗಿದ್ದರು.

	ಶಿಲ್ಪಕ್ಕೆ ರಾಜರ ಪ್ರೋತ್ಸಾಹ ತಪ್ಪಿದಮೇಲೂ ಶಿಲ್ಪಕಲೆ ಉಳಿದು ಬಂದಿರುವುದು ಕಂಡುಬರುತ್ತದೆ. ಮಲೆನಾಡಿನ ಭಾಗಗಳಲ್ಲಿ ಉಳಿದು ಬಂದಿರುವ ಗಂಧದ ಗುಡಿಗಾರರ ಕಲೆ, ಶಿವಾರಪಟ್ಟಣ ಮತ್ತು ಮೈಸೂರು ಗಳಲ್ಲಿಯ ಶಿಲ್ಪಗಳ ಕಲ್ಲಿನ ಕಂಡರಣೆ, ನಾಗಮಂಗಲದ ಲೋಹದ ಎರಕದ ಶಿಲ್ಪಗಳನ್ನು ಇಲ್ಲಿ ಹೆಸರಿಸಬಹುದು. ಶಿವಾರ ಪಟ್ಟಣದ ಶಿಲ್ಪಗಳಲ್ಲಿ ವಿಜಯನಗರ ಶಿಲ್ಪದ ಅನುಕರಣೆ ಇದ್ದರೆ, ಮೈಸೂರುಗಳಲ್ಲಿನ ಶಿಲ್ಪಗಳಲ್ಲಿ ಹೊಯ್ಸಳ ಶಿಲ್ಪದ ಪ್ರತಿಬಿಂಬ ಕಾಣಿಸುತ್ತದೆ. ಇವುಗ ಳೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ಮಿಸಿರುವ (ರಂಜಾಳ ಗೋಪಾಲ ಶೆಣೈ) ಬೃಹದ್ಗಾತ್ರದ ಗೊಮ್ಮಟೇಶ್ವರನ ಮೂರ್ತಿಯನ್ನೂ ಗಮನಿಸಬೇಕು. ಕರ್ನಾಟಕದ ಹಲವು ಚರ್ಚುಗಳಲ್ಲಿ ಕಂಡುಬರುವ ಮೂರ್ತಿಗಳಲ್ಲಿ ಐರೋಪ್ಯ ಶೈಲಿಯ ಅನುಕರಣೆ ಇದೆ. ಹಾಗೆಯೇ ಇತ್ತೀಚೆಗೆ ಐರೋಪ್ಯ ದೇಶಗಳ ಮತ್ತು ಅಮೆರಿಕದಲ್ಲಿ ಪ್ರಚಲಿತವಿರುವ ನವ್ಯಶೈಲಿಯ ಶಿಲ್ಪಗಳ ಮಾದರಿಯಲ್ಲಿ ಕರ್ನಾಟಕದಲ್ಲೂ ಹಲವು ಶಿಲ್ಪಗಳನ್ನು ಕಂಡರಿಸಿದ್ದು ಅವುಗಳಲ್ಲಿ ಹೊರ ಆಕಾರವನ್ನು ಗೌಣವಾಗೆಣಿಸಿ ಭಾವಾಭಿವ್ಯಕ್ತಿಯ ಪ್ರತಿಪಾದನೆಗೇ ಒತ್ತು ಕೊಟ್ಟಿರುವುದು ಕಂಡುಬರುತ್ತದೆ.	
				
					(ಎಮ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ